ಬೆಂಗಳೂರು: ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಜನವರಿ 1ಕ್ಕೆ ಬಿಡುಗಡೆಯಾಗಿ 50 ದಿನ ಪೂರೈಸಲಿದೆ. ಈ ಮಧ್ಯೆ. ಚಿತ್ರದ ಮುಂದುವರಿದ ಭಾಗವು ಫೆ.14ರ ಪ್ರೇಮಿಗಳ ದಿನದಂದು ಸೆಟ್ಟೇರಲಿದೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ‘ಪ್ರೇಮಂ ಪೂಜ್ಯಂ 2’ ಬರುವುದು ನಿಜವಾದರೂ, ಅದಕ್ಕಿನ್ನೂ ಸ್ವಲ್ಪ ಸಮಯವಿದೆ ಎಂದು ಸ್ವತಃ ನಿರ್ದೇಶಕ ಡಾ. ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಪ್ರೇಮಂ ಪೂಜ್ಯಂ 2’ ಚಿತ್ರದ ಸ್ಕ್ರಿಪ್ಟ್ ವರ್ಕ್ ಸಂಪೂರ್ಣವಾಗಿ ಮುಗಿದಿಲ್ಲ. ಮೊದಲ ಭಾಗ ಕ್ಲಾಸ್ ಆಗಿದ್ದರೆ, ಇದರಲ್ಲಿ ಕ್ಲಾಸ್ ಮತ್ತು ಮಾಸ್ ಎರಡೂ ಇದೆ. ಈ ಚಿತ್ರದಲ್ಲಿ ಮನರಂಜನೆ, ಆಕ್ಷನ್ ಎಲ್ಲವೂ ಇದೆ. ಬಹುಶಃ ‘ಪಿಪಿ 2’ ಚಿತ್ರವೇ ಮೊದಲು ಬಂದಿದ್ದರೆ ಜನ ಇಷ್ಟಪಡುತ್ತಿದ್ದರೇನೋ? ಆದರೆ, ಅದಕ್ಕೂ ಮೊದಲು ‘ಪಿಪಿ1’ ಮೂಲಕ ಹಾದು ಹೋಗಬೇಕಿತ್ತು. ಸ್ವಲ್ಪ ರಿಸ್ಕಿಯಾದರೂ ಅದೇ ಕಾರಣಕ್ಕೆ ‘ಪ್ರೇಮಂ ಪೂಜ್ಯಂ’ ಮೊದಲು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ರಾಘವೇಂದ್ರ.
‘ಪಿಪಿ2’ ಮೊದಲ ಭಾಗಕ್ಕೆ ಕಾಂಟ್ರಾಸ್ಟ್ ಆಗಿದ್ದರೂ, ಕೊನೆಗೆ ಪ್ರೇಮ ಎನ್ನುವುದು ಪೂಜ್ಯ ಎಂಬುದು ಈ ಚಿತ್ರದಲ್ಲೂ ಇರುತ್ತದೆ ಎನ್ನುವ ರಾಘವೇಂದ್ರ, ‘ಇಲ್ಲವಾದರೆ ಆ ಶೀರ್ಷಿಕೆಗೆ ಬೆಲೆಯೇ ಇರುವುದಿಲ್ಲ. ಎಷ್ಟೇ ಆಕ್ಷನ್, ಮಾಸ್ ಆಗಿದ್ದರೂ ಕೊನೆಗೆ ಪ್ರೇಮ ಪೂಜನೀಯ ಎಂದು ಜನರಿಗೆ ಆ ಚಿತ್ರದ ಮೂಲಕ ಸಂದೇಶ ಸಿಗುತ್ತದೆ. ಹಾಗಿದ್ದರೆ ಆ ಹೆಸರಿಗೂ ಗೌರವ’ ಎಂಬುದು ಅವರ ನಂಬಿಕೆ.