ಸಿನಿವಾಣಿ

ಪ್ರಶಾಂತ್ ವೈಷ್ಣವಿ ಔಟ್; ಇಂದು ಬಿಗ್ ಬಾಸ್ ವಿನ್ನರ್ ಘೋಷಣೆ

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ ಎಂಟು ಇಂದು ಮುಕ್ತಾಯವಾಗಲಿದೆ. ಕಾರ್ಯಕ್ರಮದ ನಿರೂಪಕ ಸುದೀಪ್ ಭಾನುವಾರ ಮನೆಗೆ ಅಂತಿಮ ಭೇಟಿ ಕೊಟ್ಟು, ಅಲ್ಲಿ ಉಳಿದಿರುವ ಇಬ್ಬರು ಸ್ಪರ್ಧಿಗಳನ್ನು ‘ಬಿಗ್ ಬಾಸ್’ ವೇದಿಕೆಗೆ ಕರೆತಂದು, ಅಲ್ಲಿ ಅಂತಿಮವಾಗಿ ವಿಜೇತರ ಹೆಸರನ್ನು ಘೋಷಿಸಲಿದ್ದಾರೆ. ಅಲ್ಲಿಗೆ ಕಾರ್ಯಕ್ರಮದ ಎಂಟನೇ ಸೀಸನ್ ಅಧಿಕೃತವಾಗಿ ಮುಕ್ತಾಯವಾಗಲಿದೆ. ಈ ಮಧ್ಯೆ, ಮನೆಯಿಂದ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಹೊರಬಂದಿದ್ದಾರೆ.

ಕಳೆದ ಶನಿವಾರ ಮತ್ತು ಭಾನುವಾರ ಮನೆಯಿಂದ ಶುಭಾ ಪೂಂಜ ಮತ್ತು ಶಮಂತ್ ಎಲಿಮಿನೇಟ್ ಆಗಿದ್ದರು. ಅವರಿಬ್ಬರು ಹೊರನಡೆದಿದ್ದರಿಂದ ಮನೆಯಲ್ಲಿ ಆರು ಜನ ಮಾತ್ರ ಉಳಿದಿದ್ದರು. ವಾರದ ಮಧ್ಯೆ, ದಿವ್ಯಾ ಸುರೇಶ್ ಹೊರಬರುವ ಮೂಲಕ ಸ್ಪರ್ಧಿಗಳ ಸಂಖ್ಯೆ ಐದಕ್ಕಿಳಿಯಿತು. ಸ್ಪರ್ಧಿಗಳು ಮಾತ್ರ ಉಳಿದಿದ್ದರು. ಈ ಪೈಕಿ, ಶನಿವಾರ ರಾತ್ರಿ ಐದನೇ ಸ್ಪರ್ಧಿಯಾಗಿ ಪ್ರಶಾಂತ್ ಸಂಬರಗಿ ಮನೆಯಿಂದ ಹೊರನಡೆದರು. ಅದಾಗಿ ಕೆಲವೇ ತಾಸುಗಳಲ್ಲಿ ನಾಲ್ಕನೇ ಸ್ಪರ್ಧಿಯಾಗಿ ವೈಷ್ಣವಿ ಗೌಡ ಮನೆಯಿಂದ ಹೊರಬಂದರು.

ಈಗ ಮನೆಯಲ್ಲಿ ಅರವಿಂದ್ ಕೆಪಿ, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಮಾತ್ರ ಉಳಿದಿದ್ದು, ಈ ಮೂವರ ಪೈಕಿ ಇಬ್ಬರು ಮಾತ್ರ ಅಂತಿಮ ಸುತ್ತಿಗೆ ಹೋಗಲಿದ್ದಾರೆ. ಮಿಕ್ಕಂತೆ ಮೂರನೆಯ ಸ್ಪರ್ಧಿಯ ಎಲಿಮಿನೇಶನ್ ಇಂದು ಮೊದಲು ನಡೆಯಲಿದ್ದು, ಆ ನಂತರ ವಿಜೇತರ ಘೋಷಣೆಯಾಗಲಿದೆ.