ಸಿನಿವಾಣಿ

ಸದ್ದಿಲ್ಲದೆ ಮತ್ತೊಂದು ಮದುವೆಯಾದರಾ ಪ್ರಭುದೇವ?

manjunathktgns

ಚೆನ್ನೈ: ನಟ-ನಿರ್ದೇಶಕ ಪ್ರಭುದೇವ ಸದ್ದಿಲ್ಲದೆ ತಮ್ಮ ಸಂಬಂಧಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ವಾರವೇ ಕೇಳಿಬಂದಿತ್ತು. ಆದರೆ, ಈ ಸುದ್ದಿಗಳೆಲ್ಲಾ ಅಂತೆ-ಕಂತೆಗಳ ಲೆವೆಲ್​ನಲ್ಲೇ ಇತ್ತು.

ಈಗ ಈ ವಿಷಯವಾಗಿ ಇನ್ನೊಂದು ಅಪ್​ಡೇಟ್​ ಬಂದಿದ್ದು, ಪ್ರಭುದೇವ ಅವರು ಈಗಾಗಲೇ ಸದ್ದಿಲ್ಲದೆ ಮದುವೆಯಾಗಿದ್ದು, ಅವರು ಮದುವೆಯಾಗಿರುವ ಹೆಣ್ಣು ಅವರ ಸಂಬಂಧಿಯಲ್ಲ, ಬದಲಿಗೆ ಅವರೊಬ್ಬ ವೈದ್ಯೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಪ್ರಭುದೇವ ಕಳೆದ ಕೆಲವು ವರ್ಷಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಫಿಸಿಯೋಥೆರಪಿಸ್ಟ್​ ಒಬ್ಬರಿಂದ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರಂತೆ. ಚಿಕಿತ್ಸೆ ಪಡೆಯುತ್ತಾ ಪಡೆಯುತ್ತಾ ಅವರಿಬ್ಬರ ಮಧ್ಯೆ ಲವ್​ ಆಗಿ, ಆ ಪ್ರೀತಿ ಮದುವೆಯಲ್ಲಿ ಅಂತ್ಯವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರಭುದೇವ ಈ ವಿಷಯವನ್ನು ಎಷ್ಟು ರಹಸ್ಯವಾಗಿಟ್ಟಿದ್ದಾರೆಂದರೆ, ಸಂಬಂಧಿಕರು ಮತ್ತು ಕೆಲವು ಆಪ್ತಸ್ನೇಹಿತರು ಬಿಟ್ಟರೆ ಮಿಕ್ಕಂತೆ ಚಿತ್ರರಂಗದಲ್ಲಿ ಯಾರಿಗೂ ಈ ವಿಷಯದ ಬಗ್ಗೆ ಗೊತ್ತಿಲ್ಲವಂತೆ.

ಅಂದಹಾಗೆ, ಪ್ರಭುದೇವ ಅವರಿಗೆ ಇದು ಎರಡನೆಯ ಮದುವೆ. ಹಲವು ವರ್ಷಗಳ ಹಿಂದೆ ರಾಮಲತಾ ಎನ್ನುವವರ ಜತೆಗೆ ಅವರು ಮದುವೆಯಾಗಿದ್ದು, ಅವರಿಗೆ ಮೂವರು ಮಕ್ಕಳೂ ಇದ್ದರು. ಒಂದು ಹಂತದಲ್ಲಿ ತಮ್ಮ ಪತ್ನಿಗೆ ಡೈವೋರ್ಸ್​ ನೀಡಿದ ಪ್ರಭುದೇವ, ನಟಿ ನಯನತಾರಾ ಅವರನ್ನು ಪ್ರೀತಿಸುತ್ತಿದ್ದರು. ಆಮೇಲೆ ಕಾರಣಾಂತರಗಳಿಂದ ನಯನತಾರಾ ಸಹ ಬಿಟ್ಟು ಹೋದಮೇಲೆ, ಪ್ರಭುದೇವ ನಟನೆ-ನಿರ್ದೇಶನದ ಬಗ್ಗೆ ಹೆಚ್ಚು ಗಮನಹರಿಸಿದ್ದರು.

ಈಗ ಅವರು ಸದ್ದಿಲ್ಲದೆ ಇನ್ನೊಂದು ಮದುವೆಯಾಗಿದ್ದಷ್ಟೇ ಅಲ್ಲ, ಚೆನ್ನೈನಲ್ಲಿ ಪತ್ನಿಯೊಂದು ಸುಖಸಂಸಾರ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.