ಗ್ಲಾಮರ್ ಮರದ ಹಕ್ಕಿ ನಾನಲ್ಲ - ಇಂದು ‘ಆಕ್ಟ್ 1978’ ಚಿತ್ರ ಬಿಡುಗಡೆ

Yajna Shetty
Published on

ಬೆಂಗಳೂರು : ಕರೊನಾ ಲಾಕ್​ಡೌನ್​ನಿಂದಾಗಿ ಸುದೀರ್ಘ ಎಂಟು ತಿಂಗಳ ಬಳಿಕ ಒಂದೇ ಒಂದು ಹೊಸ ಸಿನಿಮಾ ಇಲ್ಲಿಯವರೆಗೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿಲ್ಲ. ಹೊಸ ಚಿತ್ರಗಳು ಬಿಡುಗಡೆ ಮಾಡಿದರೆ, ಜನ ಚಿತ್ರಮಂದಿರದತ್ತ ಬರುತ್ತಾರೋ ಇಲ್ಲವೋ ಎಂಬ ಭಯದಲ್ಲಿ ಎಲ್ಲರೂ ಇರುವಾಗಲೇ, ನಿರ್ದೇಶಕ ಮಂಸೋರೆ ಮತ್ತು ನಿರ್ಮಾಪಕ ದೇವರಾಜ್ ಗಟ್ಟಿ ಧೈರ್ಯ ಮಾಡಿದ್ದಾರೆ. ‘ಆಕ್ಟ್ 1978’ ಚಿತ್ರವನ್ನು ಇಂದು (ನ. 20) ರಾಜ್ಯಾದ್ಯಂತ 80ಕ್ಕೂ ಅಧಿಕ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಯಜ್ಞಾ ಶೆಟ್ಟಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿಯೇ ಒಂದು ವರ್ಷದ ಮೇಲಾಗಿತ್ತು. ಇದೀಗ ಅವರು ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರದಲ್ಲೊಂದು ಪ್ರಮುಖ ಮತ್ತು ಪ್ರಬಲವಾದ ಪಾತ್ರದ ಮೂಲಕ ವಾಪಸ್ಸಾಗಿದ್ದಾರೆ. ಈ ಚಿತ್ರ ಮತ್ತು ಅದರಲ್ಲಿನ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿರುವ ಯಜ್ಞಾ, ‘ವಿಜಯವಾಣಿ’ಯೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಮಾಜದ ಹಲವು ಸಮಸ್ಯೆಗಳನ್ನು ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ ಎನ್ನುವ ಅವರು, ‘ಇಡೀ ಸಿನಿಮಾ ಯಾವುದೋ ಒಂದೇ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಸಮಾಜದೊಳಗಿನ ಆಯ್ದ ಒಂದಷ್ಟು ಸ್ತರಗಳ ಬದುಕು ಮತ್ತು ಬವಣೆಯನ್ನು ಇಲ್ಲಿ ತೋರಿಸಲಾಗುತ್ತದೆ. ಸರ್ಕಾರದ ಕಾಯ್ದೆ ಕಾನೂನು ಸಹ ಇಲ್ಲಿ ಪ್ರಮುಖ ಪಾತ್ರಗಳಂತೆ ಕಾಣಿಸುತ್ತವೆ. ಅದೆಲ್ಲದರ ನಡುವೆ ಒಂಬತ್ತು ತಿಂಗಳ ತುಂಬು ಗರ್ಭಿಣಿಯ ಹೋರಾಟದ ಕಥೆಯೂ ಇದೆ. ಕಮರ್ಷಿಯಲ್ ರೀತಿಯನ್ನು ಬದಿಗೆ ಸರಿಸಿ ಥ್ರಿಲ್ಲರ್ ಶೈಲಿಯಲ್ಲಿ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.

‘ಮಂಸೋರೆ ಅವರ ‘ಹರಿವು’, ‘ನಾತಿಚರಾಮಿ’ ಸಿನಿಮಾ ನೋಡಿದ್ದೇನೆ. ಅವರ ಸಿನಿಮಾಗಳಲ್ಲಿ ಸಾಮಾಜಿಕ ಅಂಶಗಳೇ ಪ್ರಧಾನ. ‘ಆಕ್ಟ್ 1978’ ಚಿತ್ರದಲ್ಲಿಯೂ ಅದು ಮುಂದುವರಿದಿದೆ. ಗರ್ಭಿಣಿಯ ಪಾತ್ರ ಮಾಡುವುದು ಸುಲಭವಲ್ಲ. ಅದನ್ನು ನಾನಿಲ್ಲಿ ನಿಭಾಯಿಸಿದ್ದೇನೆ. ನನ್ನ ಸಿನಿಮಾ ಕರಿಯರ್ಞ್​ಲ್ಲಿ ಸಿಕ್ಕ ಒಳ್ಳೇ ಅವಕಾಶವಿದು. ಅದನ್ನು ಅಷ್ಟೇ ಚೆನ್ನಾಗಿ ಬಳಸಿಕೊಂಡಿದ್ದೇನೆ. ಗ್ಲಾಮರ್ ಮರದ ಹಕ್ಕಿ ನಾನಲ್ಲ. ಡಿಗ್ಲಾಮ್ ಆದರೂ ಸರಿ ನಟನೆಗೆ ಜಾಗ ಇರುವ ಸಿನಿಮಾ ನನ್ನ ಮೊದಲ ಆಯ್ಕೆ’ ಎಂದೂ ಹೇಳಿಕೊಳ್ಳುತ್ತಾರೆ ಯಜ್ಞಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net