ನಂದಿನಿ, ರೇಣು ಬಳಿಕ ಅನ್ನಾಗೂ ಗುಡ್​ಬೈ! ದೀಪಾವಳಿ ಹಬ್ಬದಂದೇ 13 ವರ್ಷಗಳ ದಾಂಪತ್ಯ ಮುರಿದುಕೊಂಡ ಪವನ್​ ಕಲ್ಯಾಣ್​ | Pawan Kalyan  
ಸಿನಿವಾಣಿ

ನಂದಿನಿ, ರೇಣು ಬಳಿಕ ಅನ್ನಾಗೂ ಗುಡ್​ಬೈ! ದೀಪಾವಳಿ ಹಬ್ಬದಂದೇ 13 ವರ್ಷಗಳ ದಾಂಪತ್ಯ ಮುರಿದುಕೊಂಡ ಪವನ್​ ಕಲ್ಯಾಣ್​ | Pawan Kalyan

Pawan Kalyan Divorce: ತೆಲುಗು ಚಿತ್ರರಂಗದ ಪವರ್ ಸ್ಟಾರ್, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಶಾಕಿಂಗ್ ಬೆಳವಣಿಗೆಯೊಂದು ನಡೆದು ಹೋಗಿದೆ. ದೀಪಾವಳಿ ಹಬ್ಬದಂದೇ ತಮ್ಮ ಮೂರನೇ ಪತ್ನಿ ರಷ್ಯಾ ಮೂಲದ ಅನ್ನಾ ಕೊಣಿದಾಲ ಜತೆಗಿನ 13 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ಗುಡ್​ಬೈ ಹೇಳಿದ್ದಾರೆ.

ತಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಇಬ್ಬರೂ ದೃಢವಾಗಿ ನಿರ್ಧರಿಸಿದ್ದು, ಪರಸ್ಪರ ಒಪ್ಪಿಗೆ ಮತ್ತು ಗೌರವದ ಮೇರೆಗೆ ದೂರವಾಗುತ್ತಿರುವುದಾಗಿ ಜಂಟಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಜೋಡಿ, ಮಕ್ಕಳ ಸಂತೋಷ ಮತ್ತು ಭವಿಷ್ಯವೇ ತಮ್ಮ ಮೊದಲ ಆದ್ಯತೆ ಎಂದು ತಿಳಿಸಿ, ಡಿವೋರ್ಸ್​ ನೀಡಿರುವುದು ಸದ್ಯ ನಟನ ಅಭಿಮಾನಿಗಳಲ್ಲಿ ಭಾರಿ ಅಚ್ಚರಿ ಹಾಗೂ ಗೊಂದಲ ಮೂಡಿಸಿದೆ.

ಪವನ್​-ಅನ್ನಾ ಜೋಡಿ ಪೋಸ್ಟ್​ನಲ್ಲಿ ಏನಿದೆ?

ಪವನ್ ಕಲ್ಯಾಣ್ ಮತ್ತು ಅನ್ನಾ ಅವರು ತಮ್ಮ ಆಪ್ತರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ, ನಮ್ಮ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ಬಳಿಕ ಪರಸ್ಪರ ಅರ್ಥ ಮಾಡಿಕೊಂಡು ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಮತ್ತು ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಕ್ಷೇಮವೇ ನಮ್ಮ ಮೊದಲ ಆದ್ಯತೆ" ಎಂದು ಬರೆದಿದ್ದಾರೆ.

ಈ ವೈಯಕ್ತಿಕ ಬೆಳವಣಿಗೆಯ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ವಿಶೇಷವಾಗಿ ಮನವಿ ಮಾಡಿದ್ದಾರೆ. ಹೇಳಿಕೆಯಲ್ಲಿ ದಿಢೀರ್​ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಇಬ್ಬರೂ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಹಿಂದಿನ ಎರಡು ಮದುವೆಗಳು ಮತ್ತು ವಿಚ್ಛೇದನಗಳು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಮೂರು ಮದುವೆ, ಮೂರು ವಿಚ್ಛೇದನ

ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಅವರೊಂದಿಗೆ ಮೊದಲಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, ದಾಂಪತ್ಯದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ 1999ರ ವೇಳೆಗೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಹಲವು ವರ್ಷಗಳ ಕಾನೂನು ಪ್ರಕ್ರಿಯೆಯ ಬಳಿಕ 2008ರ ಆಗಸ್ಟ್‌ನಲ್ಲಿ ವಿಚ್ಛೇದನ ಪಡೆದರು. ಈ ಡಿವೋರ್ಸ್​ ಸಂದರ್ಭದಲ್ಲೇ ಪವನ್, ನಂದಿನಿಗೆ ಐದು ಕೋಟಿ ರೂಪಾಯಿ ಮೊತ್ತವನ್ನು ಒನ್​ ಟೈಮ್​ ಸೆಟ್ಲ್​ಮೆಂಟ್​ ಆಗಿ ನೀಡಲು ಒಪ್ಪಿಕೊಂಡಿದ್ದರು ಎಂದು ಅಂದಿನ ವರದಿಗಳು ತಿಳಿಸಿವೆ.

2ನೇ ಮದುವೆ - ನಟಿ ರೇಣು ದೇಸಾಯಿ

ನಂದಿನಿ ಅವರಿಂದ ವಿಚ್ಛೇದನ ಪಡೆದ ನಂತರ ಪವನ್ ಕಲ್ಯಾಣ್ ಅವರು ನಟಿ ಹಾಗೂ ಮಾಡೆಲ್ ರೇಣು ದೇಸಾಯಿ ಅವರನ್ನು 2009ರ ಜನವರಿಯಲ್ಲಿ ವಿವಾಹವಾದರು. ಇವರಿಬ್ಬರು 'ಬದ್ರಿ' ಮತ್ತು 'ಜಾನಿ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಜೋಡಿ. ಮದುವೆಗೂ ಮುನ್ನ ಹಲವು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಬಳಿಕ ಮದುವೆಯಾಗಿ ಹೊಸ ಜೀವನ ಆರಂಭಿಸಿದರು.

ಈ ದಂಪತಿಗೆ ಅಕಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಈ ಸಂಬಂಧವೂ ಹೆಚ್ಚು ಕಾಲ ಮುಂದುವರಿಯಲಿಲ್ಲ. 2011ರ ವೇಳೆಗೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ನಂತರ, 2012ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದು ದೂರ ಸರಿದರು.

ರಷ್ಯಾ ಮೂಲದ ಅನ್ನಾ: ಮೂರನೇ ಮದುವೆ

ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆದ ಪವನ್ ಕಲ್ಯಾಣ್, ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು 2013ರ ಸೆಪ್ಟೆಂಬರ್‌ನಲ್ಲಿ ಮದುವೆಯಾದರು. ಅನ್ನಾ ಅವರು ಪವನ್ ಕಲ್ಯಾಣ್ ಅಭಿನಯದ 'ತೀನ್ ಮಾರ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಎಲ್ಲವೂ ಚೆನ್ನಾಗಿಯೇ ಇದೆ ಎಂದು ಎನ್ನುವಾಗಲೇ ಶಾಕಿಂಗ್ ಎಂಬಂತೆ ಇದೀಗ ತಮ್ಮ 13 ವರ್ಷಗಳ ದಾಂಪತ್ಯದ ಬದುಕಿಗೆ ಅನ್ನಾ ಮತ್ತು ಪವನ್ ಕಲ್ಯಾಣ್ ಡಿವೋರ್ಸ್​ ನೀಡುವ ಮೂಲಕ ಸಂಪೂರ್ಣವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಒಟ್ಟಾರೆ, ಪವನ್ ಕಲ್ಯಾಣ್ ಅವರ ಮೂರನೇ ಮದುವೆ ಕೂಡ ವಿಚ್ಛೇದನದಲ್ಲೇ ಅಂತ್ಯಗೊಂಡಿರುವುದು ಇದೀಗ ನಟನ ಅಭಿಮಾನಿಗಳಲ್ಲಿ ಭಾರಿ ಅಚ್ಚರಿ, ಬೇಸರ ಮೂಡಿಸಿದೆ. ಸದ್ಯದ ಮಟ್ಟಿಗೆ ಅನ್ನಾ-ಪವನ್​ರ ಈ ಕಟು ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ,(ಏಜೆನ್ಸೀಸ್).