ಅದ್ಯಾಕೋ ಗೊತ್ತಿಲ್ಲ, ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡುತ್ತಲೇ ಬಂದಿರುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ, ಒಂದಲ್ಲಾ ಒಂದು ರೀತಿಯಲ್ಲಿ ಕಾಳೆಯುತ್ತಲೇ ಇರುತ್ತಾರೆ. ಈ ಬಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, 'ಪವರ್ ಸ್ಟಾರ್' ಎಂಬ ಚಿತ್ರ ಪ್ರಾರಂಭಿಸಿ, ಅದರಲ್ಲಿ ಪವನ್ ಕಲ್ಯಾಣ್ ತರಹವೇ ಇರುವ ಒಬ್ಬ ನಟನನ್ನು ಅದೆಲ್ಲೋ ಹುಡುಕಿ ತಂದು, ಪರಿಚಯಿಸುತ್ತಿದ್ದಾರೆ.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ: ಸಲ್ಮಾನ್ ಖಾನ್ ವಿಚಾರಣೆ ಇಲ್ಲ
ರಾಮ್ಗೋಪಾಲ್ ವರ್ಮಾ ಇಷ್ಟೆಲ್ಲಾ ಮಾಡುತ್ತಿದ್ದರೂ, ಪವನ್ ಕಲ್ಯಾಣ್ ಆಗಲೀ, ಅವರ ಸಹೋದರ ನಾಗಬಾಬು ಆಗಲೀ, ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳಾಗಲೀ ತುಟಿಕ್ ಪಿಟಿಕ್ ಎಂದಿಲ್ಲ. ಈ ಹಿಂದೆ ಇದೇ ತರಹ ಏನಾದರೂ ಆಗಿದ್ದರೆ, ತೊಂದರೆ ಕೊಟ್ಟವರಿಗೆ ತಕ್ಕ ಪಾಠ ಕಲಿಸುತ್ತಿದ್ದರು ಪವನ್ ಕಲ್ಯಾಣ್ ಫ್ಯಾನ್ಸ್. ಆದರೆ, ಈ ಬಾರಿ ಮಾತ್ರ ಯಾರೂ, ಯಾಕೆ ಮಾತಾಡುತ್ತಿಲ್ಲ ಎಂಬ ಪ್ರಶ್ನೆ ಟಾಲಿವುಡ್ನಲ್ಲಿ ಕಾಡುತ್ತಿದೆ.
ಮೂಲಗಳ ಪ್ರಕಾರ, ರಾಮ್ಗೋಪಾಲ್ ವರ್ಮಾ ಬಗ್ಗೆ ಏನನ್ನೂ ಹೇಳಬೇಡಿ ಎಂದು ಖುದ್ದು ಪವನ್ ಕಲ್ಯಾಣ್, ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯಾರೇ ಆಗಲಿ, ತಮ್ಮ ಬಗ್ಗೆ ಒಬ್ಬರು ಚಿತ್ರ ಮಾಡುತ್ತಿದ್ದಾರೆ ಎಂದರೆ ಗಾಬರಿಗೊಳ್ಳುವುದು ಸಹಜ. ಆದರೆ, ಪವನ್ ಮಾತ್ರ ಕೂಲ್ ಆಗಿರುವುದಷ್ಟೇ ಅಲ್ಲ, ತಮ್ಮ ಅಭಿಮಾನಿಗಳಿಗೂ ಕೂಲ್ ಆಗಿ ಇರುವುದಕ್ಕೆ ಯಾಕೆ ಹೇಳಿರಬಹುದು ಎಂಬ ಪ್ರಶ್ನೆ ಹಲವರನ್ನು ಕಾಡಿದೆ.
ಇದಕ್ಕೆ ಉತ್ತರ ಏನೆಂದರೆ, ವರ್ಮಾ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದಕ್ಕೆ ಪವನ್ ತೀರ್ಮಾನಿಸಿದ್ದಾರೆ. ಏಕೆಂದರೆ, ವರ್ಮಾಗೆ ಎಂಥಾ ವಿಷಯವನ್ನಾದರೂ ಪಾಸಿಟಿವ್ ಆಗಿ, ಪ್ರಚಾರಕ್ಕಾಗಿ ಬಳಸಿಕೊಳ್ಳುವ ಚಾಣಾಕ್ಷತನವಿದೆ. ಹೀಗಿರುವಾಗ, ಏನೋ ಹೇಳುವುದಕ್ಕೆ ಹೋಗಿ, ಇನ್ನೇನೋ ಆಗುವ ಬದಲು, ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟರೆ, ಆಗ ವರ್ಮಾ ಉದ್ದೇಶ ಈಡೇರಿವುದಿಲ್ಲ.
ಹಾಗಾಗಿ ವರ್ಮಾ ಮತ್ತು 'ಪವರ್ ಸ್ಟಾರ್' ಚಿತ್ರವನ್ನು ಪವನ್ ಕಲ್ಯಾಣ್ ಒಬ್ಬರು ನಿರ್ಲಕ್ಷಿಸಿರುವುದು ಅಷ್ಟೇ ಅಲ್ಲ, ತಮ್ಮ ಅಭಿಮಾನಿಗಳಿಗೂ ಅದೇ ದಾರಿಯಲ್ಲಿ ನಡೆಯುವುದಕ್ಕೆ ಸಲಹೆ ನೀಡಿದ್ದಾರಂತೆ. ಚಿತ್ರದ ಕುರಿತು ಸುದ್ದಿಯಾದಾಗ, ಪವನ್ ಮತ್ತು ಅವರ ಅಭಿಮಾನಿಗಳು ದೊಡ್ಡ ಗಲಾಟೆ ಮಾಡಬಹುದು ಎಂದು ನಿರೀಕ್ಷಿಸಿದ್ದ ವರ್ಮಾ ಅವರಿಗೆ ಈ ನಿರ್ಲಕ್ಷ್ಯದಿಂದ ಏನಾಗುತ್ತಿದೆಯೋ ಗೊತ್ತಿಲ್ಲ.