ಸಿನಿವಾಣಿ

ಬಾಲಿವುಡ್​ ನಟನ ಬಂಗಲೆಯನ್ನು ಮ್ಯೂಸಿಯಂ ಮಾಡುತ್ತಿದೆ ಪಾಕಿಸ್ತಾನ ಸರ್ಕಾರ

ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿರುವ ಬಾಲಿವುಡ್​ನ ಖ್ಯಾತ ನಟನ ಬಂಗಲೆಯನ್ನು ಪಾಕಿಸ್ತಾನ ಸರ್ಕಾರ ಮ್ಯೂಸಿಯಂ ಮಾಡಲು ನಿರ್ಧರಿಸಿದೆ. ನಟ ದಿಲೀಪ್ ಕುಮಾರ್ ಒಡೆತನದ ಪುರಾತನ ಬಂಗಲೆಯನ್ನು ಖರೀದಿಸಿ ಅದನ್ನು ರಕ್ಷಿಸುವ ಹೊಣೆ ಹೊರಲು ಅಲ್ಲಿನ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಮೊದಲು ಪೇಶಾವರದಲ್ಲಿನ ದಿಲೀಪ್​ ಮನೆಯನ್ನು ಕೆಲ ಉದ್ಯಮಿಗಳು ಖರೀದಿಗೆ ಮುಂದಾಗಿದ್ದರು. ಈ ನಡುವೆ ಕಟ್ಟಡ ಹಳೆಯದಾಗಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದೂ ಕೆಲವರು ಹೇಳಿಕೊಂಡಿದ್ದರು. ಆದಷ್ಟು ಬೇಗ ಇದನ್ನು ನೆಲಸಮ ಮಾಡಿ, ಇಲ್ಲವೆ ಬೇರೆಯವರಿಗೆ ಮಾರಾಟ ಮಾಡಿ ಎಂದೂ ಸ್ಥಳೀಯರು ವಾದಿಸಿದ್ದರು.

ಇದೀಗ ಆ ಕಟ್ಟಡವನ್ನೇ ಖರೀದಿಸಲು ಪೇಶಾವರ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕಟ್ಟಡದ ಕೆಲ ಭಾಗ ಹಾಳಾಗಿದ್ದು, ಅದೆಲ್ಲವನ್ನು ಜಿಲ್ಲಾಡಳಿತವೇ ಸರಿಮಾಡಲಿದೆ. ಇದಾದ ಬಳಿಕ ಕಟ್ಟಡದವನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಿದೆ.

ನಟ ದಿಲೀಪ್​ ಕುಮಾರ್​ ಅವರ ಬಾಲಿವುಡ್​ ಸಿನಿಮಾ ಜರ್ನಿ ಮತ್ತು ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಗಳೇನು ಎಂಬುದನ್ನು ಹೇಳುವ ಒಂದಷ್ಟು ಚಿತ್ರಗಳನ್ನೂ ಅಲ್ಲಿ ಪ್ರದರ್ಶನಕ್ಕಿಡಲಿದೆ. ಖರೀದಿ ಪ್ರಕ್ರಿಯೆ ಯಾವಾಗ ಶುರು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಲಿದೆ. (ಏಜೆನ್ಸೀಸ್​)