ಸಿನಿವಾಣಿ

ಲಡ್ಡು ಬಂದು ಬಾಯಿಗೆ ಬೀಳುತ್ತೆ...: ಇಂದು ಅವತಾರ ಪುರುಷ ಸಾಂಗ್ ರಿಲೀಸ್

ಬೆಂಗಳೂರು: ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರವು ಡಿ. 10ಕ್ಕೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಪ್ರಚಾರ ಕೆಲಸಗಳು ಪ್ರಾರಂಭವಾಗಿದ್ದು, ಇಂದು ಎರಡನೆಯ ಹಾಡು ಬಿಡುಗಡೆಯಾಗಲಿದೆ. ಈಗಾಗಲೇ, ‘ಅವತಾರ ಪುರುಷ’ ಚಿತ್ರದ ಪ್ರಚಾರಕ್ಕೆ ರಾಜ್ಯಾದ್ಯಂತ 25 ವಾಹನಗಳು ಓಡಾಡುತ್ತಿವೆಯಂತೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾಹಿತಿ ಹಂಚಿಕೊಂಡ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ‘ಎಲ್​ಇಡಿ ಇರುವ ವಾಹನಗಳು ಚಿತ್ರದ ಕುರಿತು ಪ್ರಚಾರ ಮಾಡುತ್ತಿವೆ. ಈ ವಾಹನಗಳಲ್ಲಿ ನಿರಂತರವಾಗಿ ಹಾಡುಗಳು ಮತ್ತು ಟೀಸರ್ ಪ್ಲೇ ಆಗುತ್ತಿದ್ದು, ಜನರಲ್ಲಿ ಚಿತ್ರದ ಬಗ್ಗೆ ಅರಿವು ಮೂಡಿಸಲಿದೆ. ಬೆಂಗಳೂರಿನಲ್ಲೇ ಇಂತಹ ಎಂಟು ವಾಹನಗಳು ಓಡಾಡುತ್ತಿದ್ದು, ಮಿಕ್ಕಂತೆ ಮಂಡ್ಯ, ಮೈಸೂರು, ತುಮಕೂರು, ಹಾಸನ, ಹುಬ್ಬಳ್ಳಿ, ಧಾರವಾಡ ಮುಂತಾದ ಕಡೆ ಪ್ರಚಾರ ನಡೆಯುತ್ತಿದೆ’ ಎನ್ನುತ್ತಾರೆ.

ಬರೀ ಪ್ರತ್ಯೇಕ ವಾಹನಗಳಷ್ಟೇ ಅಲ್ಲ, ಸೋಮವಾರದಿಂದ ಬೆಂಗಳೂರಿನಲ್ಲಿ 500 ಬಿಎಂಟಿಸಿ ಬಸ್​ಗಳು ಮತ್ತು 2000 ಸಾವಿರ ಆಟೋಗಳ ಮೇಲೆ ಚಿತ್ರದ ಹೊಸ ಪೋಸ್ಟರ್​ಗಳು ಕಾಣಸಿಗಲಿವೆ.ಇದಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ವ್ಯಾಪಕವಾಗಿ ಪ್ರಚಾರ ಮಾಡುವುದಕ್ಕೆ ಪುಷ್ಕರ್ ಹೆಜ್ಜೆ ಇಟ್ಟಿದ್ದಾರೆ. ಸದ್ಯ, ‘ಅವತಾರ್ ಪುರುಷ’ ಚಿತ್ರದ ಒಂದು ಹಾಡು ಮತ್ತು ಟೀಸರ್ ಮಾತ್ರ ಸದ್ದು ಮಾಡುತ್ತಿದೆ. ಮೊದಲೇ ಹೇಳಿದಂತೆ, ಇಂದು ‘ಲಡ್ಡು ಬಂದು ಬಾಯಿಗೆ ಬಿತ್ತಾ ...’ ಎಂಬ ಹಾಡು ಬಿಡುಗಡೆಯಾಗುತ್ತಿದೆ. ಇದರ ನಂತರ ‘ಚುಟುಚುಟು ...’ ತರಹದ ಇನ್ನೊಂದು ಹಾಡು ಬಿಡುಗಡೆಯಾಗಲಿದ್ದು, ಡಿ.6ಕ್ಕೆ ಟ್ರೇಲರ್ ಬಿಡುಗಡೆಯಾಗಲಿದೆ.