ಸಿನಿವಾಣಿ

ಮತ್ತೊಂದು ಒಲವೇ ಮಂದಾರ; ಸೆ.15ಕ್ಕೆ ತೆರೆಗೆ ಬರಲಿದೆ ಪ್ರೇಮಕಥೆ

Bengaluru - Cinema - Pramod Hegde

ಬೆಂಗಳೂರು: ‘ಕಮರೊಟ್ಟು ಚೆಕ್‌ಪೋಸ್ಟ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಸನತ್ ನಾಯಕ್ ಹೊಸ ಚಿತ್ರಕ್ಕೆ ನಾಯಕರಾಗಿದ್ದಾರೆ. ಚಿತ್ರದ ಶೀರ್ಷಿಕೆ ‘ಒಲವೇ ಮಂದಾರ 2’.

2011ರಲ್ಲಿ ಬಿಡುಗಡೆಯಾದ ಜಯತೀರ್ಥ ನಿರ್ದೇಶನದ, ರಂಗಾಯಣ ರಘು, ಶ್ರೀಕಿ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರ ‘ಒಲವೇ ಮಂದಾರ’. ಈಗ 12 ವರ್ಷಗಳ ಬಳಿಕ ಇದರ ಸೀಕ್ವಲ್ ರೆಡಿಯಾಗಿದೆ. ಚಿತ್ರಕ್ಕೆ ಎಸ್.ಆರ್. ಪಾಟೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ತೆರೆಕಂಡ ‘ಒಲವೇ ಮಂದಾರ’ ಚಿತ್ರದ ಕಥೆಗೂ ಇದಕ್ಕೂ ಸಂಬಂಧವಿಲ್ಲ, ಅದರ ಶೀರ್ಷಿಕೆ ಮಾತ್ರ ಬಳಸಲಾಗಿದೆ ಎನ್ನುವ ನಿರ್ದೇಶಕ ಎಸ್. ಆರ್. ಪಾಟೀಲ್, ‘ಇದೊಂದು ಪರಿಶುದ್ಧ ಪ್ರೇಮಕಥೆ. ಈ ಪ್ರಪಂಚದಲ್ಲಿ ಪ್ರೀತಿ ಮಾಡುವವರನ್ನು ಅಪರಾಧಿಗಳಂತೆ ನೋಡುತ್ತಾರೆ. ಆದರೆ, ಒಬ್ಬರನ್ನೊಬ್ಬರು ಅರಿತುಕೊಂಡು ಮಾಡುವ ಪ್ರೀತಿ ತಪ್ಪಲ್ಲ. ಹೀಗಾಗಿ, ತಂದೆ-ತಾಯಿಯರ ಬಳಿ ಮಕ್ಕಳು ಪ್ರೀತಿಸುವ ವಿಷಯ ಹೇಳಿ ಅವರ ಒಪ್ಪಿಗೆ ಪಡೆಯಲು ಪ್ರಯತ್ನಿಸಬೇಕೇ ಹೊರತು ಇನ್ಯಾವ ನಿರ್ಧಾರವನ್ನೂ ಕೈಗೊಳ್ಳಬಾರದು ಎಂಬ ಸಂದೇಶವಿರುವ ಚಿತ್ರವಿದು’ ಎಂದು ಮಾಹಿತಿ ನೀಡುತ್ತಾರೆ.

ಸನತ್ ನಾಯಕ್‌ಗೆ ಜೋಡಿಯಾಗಿ ಪ್ರಜ್ಞಾ ಭಟ್ ಬಣ್ಣ ಹಚ್ಚಿದ್ದಾರೆ. ಸನತ್ ಹಾಗೂ ಪ್ರಜ್ಞಾ ಜತೆಗೆ ಅನುಪಾ ಸತೀಶ್, ಭವ್ಯ, ಡಿಂಗ್ರಿ ನಾಗರಾಜ್, ಮಡೆನೂರ ಮನು, ಶಿವಾನಂದ ಸಿಂದಗಿ ಮುಖ್ಯ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಡಾ. ಕಿರಣ್ ತೋಟಂಬೈಲ್ ಸಂಗೀತವಿರಲಿದೆ. ಇದೇ ತಿಂಗಳ 15ಕ್ಕೆ ಸಿನಿಮಾ ತೆರೆಗೆ ಬರಲಿದೆ.