ಹೈದರಾಬಾದ್: ಜೂನಿಯರ್ ಎನ್‌ಟಿಆರ್ ಜೊತೆಗಿನ ಕೊರಟಾಲ ಶಿವ ಅವರ ಮುಂದಿನ ಚಿತ್ರದ ಘೋಷಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳು ಭಾನುವಾರ ಜನವರಿ 16 ರಂದು #NTR30 ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಮಾಡಿದ್ದಾರೆ. ಅಂದಹಾಗೆ, ಈ ಹೊಸ ಚಿತ್ರ ಜೂ.ಎನ್‌ಟಿಆರ್ ಅವರ 30 ನೇ ಚಿತ್ರವಾಗಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬರದಿದ್ದರೂ, ಜೂನಿಯರ್ ಎನ್‌ಟಿಆರ್ ಅವರ 'ಆರ್‌ಆರ್‌ಆರ್' ಸಹನಟಿ ಆಲಿಯಾ ಭಟ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆಂದು ಅಭಿಮಾನಿಗಳು ಊಹಿಸಿದ್ದಾರೆ.
ಅಭಿಮಾನಿಗಳ ಜೊತೆಗೆ ಹಲವು ಮೂಲಗಳ ಪ್ರಕಾರ, ಈ ಟೈಟಲ್ ಇಲ್ಲದ ಹೊಸ ಚಿತ್ರದ ಪ್ರೀ-ಪ್ರೊಡಕ್ಷನ್ ಪೂರ್ಣ ಸ್ವಿಂಗ್‌ನಲ್ಲಿ ನಡೆಯುತ್ತಿದ್ದು, ಚಿತ್ರತಂಡಕ್ಕೆ ಪ್ಯಾನ್-ಇಂಡಿಯಾ ಯೋಜನೆಯ ಪ್ಲಾನ್ ಇರುವುದರಿಂದ ನಟಿ ಮತ್ತು ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ. ಈ ಚಿತ್ರದಲ್ಲಿ ನಟ ಜೂನಿಯರ್ ಎನ್‌ಟಿಆರ್ ಒಬ್ಬ ವಿದ್ಯಾರ್ಥಿ ಸಂಘದ ನಾಯಕ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿನಿಮಾದ ಕುರಿತು ಮುಂದಿನ ತಿಂಗಳು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ ಎಂಬ ಊಹಪೋಹಗಳು ಇವೆ. ಹೀಗಾಗಿ, ಸಂಕ್ರಾಂತಿಗೆ ಗುಡ್ನ್ಯೂಸ್ ನಿರೀಕ್ಷಿಸುತ್ತಿದ್ದ ಅಭಿಮಾನಿಗಳು ಈಗಲೇ #NTR30 ಎಂದು ಸಿನಿಮಾ ಮಾಹಿತಿಯನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಅದೇನೇ ಇರಲಿ, ಸದ್ಯಕ್ಕೆ, ಎನ್‌ಟಿಆರ್ ಮತ್ತು ಆಲಿಯಾ ಎಸ್‌ಎಸ್ ರಾಜಮೌಳಿಯವರ ಬೃಹತ್ ಬಜೆಟ್‌ನ ಆಕ್ಷನ್ ಡ್ರಾಮಾ 'ಆರ್‌ಆರ್‌ಆರ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. #NTR30 ಚಿತ್ರದ ಬಗ್ಗೆ ಪೂರ್ಣ ಮಾಹಿತಿಗಾಗಿ ಮಾತ್ರ ಕಾದು ನೋಡಬೇಕಿದೆ.