ಸಿನಿವಾಣಿ

ಯಾವುದೇ ಕಾರಣಕ್ಕೂ ಬೇಡ... ಸೌತ್​ ಬ್ಯೂಟಿ ನಿತ್ಯಾ ಮೆನನ್​​ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರ! Nithya Menen

Nithya Menen : ನಟಿ ನಿತ್ಯಾ ಮೆನನ್​ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಿತ್ಯಾ, ಕನ್ನಡಿಗರಿಗೂ ಅಚ್ಚುಮೆಚ್ಚು.

ನಿತ್ಯಾ ಮೆನನ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸಿದ್ದಾರೆ. ಹೀರೋ ಯಾರೇ ಆಗಿರಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಿತ್ಯಾ ಮೆನನ್ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೆ, ನಿತ್ಯಾ ನಟಿಸಿದ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರವೇ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದೆ.

ತಾಜಾ ಸಂಗತಿ ಏನೆಂದರೆ, ನಿತ್ಯಾ ಮೆನನ್​ ಅವರು ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ, ಅವರು ಸಿನಿಮಾ ರಂಗಕ್ಕೆ ಗುಡ್​ಬೈ ಹೇಳಲು ಬಯಸಿದ್ದಾರಂತೆ. ಅಂದಹಾಗೆ ನಿತ್ಯಾ, ಪ್ರಸ್ತುತ ಜಯಂ ರವಿ ಅವರೊಂದಿಗೆ "ಕಾದಲಿಕ್ಕಾ ನೆರಮಿಲೈ" ಎಂಬ ತಮಿಳು ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರವು ಜನವರಿ 14 ರಂದು ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.

ಈ ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನವೊಂದರಲ್ಲಿ ಸಿನಿಮಾ ರಂಗವನ್ನು ತೊರೆಯುವ ಬಗ್ಗೆ ನಿತ್ಯಾ ಮಾತನಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕ ಕೂಡ ವೈರಲ್​ ಆಗಿದೆ. ನಾನು ಸಿನಿಮಾಗಳಿಂದ ದೂರ ಸರಿಯಲು ಬಯಸುತ್ತೇನೆ. ನಟನೆಯು ನನ್ನ ವ್ಯಕ್ತಿತ್ವಕ್ಕೆ ಭಿನ್ನವಾಗಿದೆ. ನಾನು ಸಾಮಾನ್ಯ ಜೀವನವನ್ನು ನಡೆಸಲು ಬಯಸುತ್ತೇನೆ ಎಂದು ನಿತ್ಯಾ ಹೇಳಿದ್ದಾರೆ.

ನಾನು ಪೈಲಟ್ ಆಗಲು ಬಯಸಿದ್ದೆ. ನಾನೇನಾದರೂ ಪೈಲಟ್ ಆಗಿದ್ದರೆ, ಇಡೀ ಜಗತ್ತನ್ನು ಪ್ರಯಾಣಿಸಲು ಸಾಧ್ಯವಾಗುತ್ತದೆ. ನನಗೆ ಪ್ರಕೃತಿ ಮತ್ತು ಪ್ರಯಾಣ ತುಂಬಾ ಇಷ್ಟ. ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ನಂತರ ನಟಿಯಾಗಿ ನನ್ನ ಜೀವನ ಪರಿಪೂರ್ಣವೆಂದು ತೋರುತ್ತದೆ. ಅದಕ್ಕಾಗಿಯೇ ನಾನು ಒಪ್ಪಿಕೊಂಡ ಯೋಜನೆಗಳನ್ನು ಪೂರ್ಣಗೊಳಿಸಿ, ಬಣ್ಣದ ಲೋಕದಿಂದ ದೂರ ಸರಿಯುತ್ತೇನೆ. ನಾನು ಎಲ್ಲಿದ್ದೇನೆಂದು ಯಾರಿಗೂ ತಿಳಿಯಬಾರದು. ಚಿತ್ರರಂಗ ಬಿಡುವ ಬಗ್ಗೆ ನನ್ನ ತಂದೆಗೆ ಹೇಳಿದ್ದೇನೆ, ಅವರು ಕೂಡ ನನ್ನ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ನಿತ್ಯಾ ಹೇಳಿಕೊಂಡಿದ್ದಾರೆ.

ಸದ್ಯ ನಿತ್ಯಾ ಮೆನನ್ ಅವರು ತಮ್ಮ ಕೈಯಲ್ಲಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ ಸಿನಿಮಾಗಳಿಗೆ ವಿದಾಯ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಾತುಗಳನ್ನು ಕೇಳಿದ ನಿತ್ಯಾ ಅವರ ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಚಿತ್ರರಂಗವನ್ನು ತೊರೆಯಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ನಿತ್ಯಾ ಮೆನನ್ ಅವರು ಈ ಹಿಂದೆ ತಿರುಚಿತ್ರಂಬಲಂ ಸಿನಿಮಾ ಸಮಯದಲ್ಲೂ ಇದೇ ಮಾತನ್ನು ಹೇಳಿದ್ದರು. ನಿತ್ಯಾ ಮೆನನ್ ನಟಿಸಿದ ತಿರುಚಿತ್ರಂಬಲಂ ಸಿನಿಮಾ ಉತ್ತಮ ಯಶಸ್ಸನ್ನು ಕಂಡಿತು. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ನಿತ್ಯಾ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು.

ನಿತ್ಯಾ ಅವರು ಪ್ರಸ್ತುತ 'ಕಾದಲಿಕ್ಕಾ ನೆರಮಿಲೈ' ಚಿತ್ರದೊಂದಿಗೆ ಸಂಕ್ರಾಂತಿಯಂದು ತೆರೆಯ ಮೇಲೆ ಬರುತ್ತಿದ್ದಾರೆ. ಅವರ ಕೈಯಲ್ಲಿ ಇನ್ನೂ ನಾಲ್ಕು ಚಿತ್ರಗಳಿವೆ ಎಂಬ ವರದಿಗಳಿವೆ. ಹೇಳಿದಂತೆ ನಿತ್ಯಾ ಅವರು ಆ ಚಿತ್ರಗಳನ್ನು ಪೂರ್ಣಗೊಳಿಸಿ, ಚಿತ್ರರಂಗವನ್ನು ತೊರೆಯುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)