

Nithya Menen : ನಟಿ ನಿತ್ಯಾ ಮೆನನ್ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಿತ್ಯಾ, ಕನ್ನಡಿಗರಿಗೂ ಅಚ್ಚುಮೆಚ್ಚು.
ನಿತ್ಯಾ ಮೆನನ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸಿದ್ದಾರೆ. ಹೀರೋ ಯಾರೇ ಆಗಿರಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಿತ್ಯಾ ಮೆನನ್ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೆ, ನಿತ್ಯಾ ನಟಿಸಿದ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರವೇ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದೆ.
ಇನ್ನು ಸಿನಿಮಾ ದೊಡ್ಡದಾದಷ್ಟೂ ಸಂಭಾವನೆ ಕೂಡ ಹೆಚ್ಚುತ್ತದೆ ಎಂಬ ಕಾರಣಕ್ಕೆ ದೊಡ್ಡ ಚಿತ್ರಗಳನ್ನು ನಿತ್ಯಾ ಒಪ್ಪುವುದಿಲ್ಲ. ತಮ್ಮ ಪಾತ್ರಕ್ಕೆ ಆದ್ಯತೆ ನೀಡಿದರೆ ಮಾತ್ರ ಅದರಲ್ಲಿ ನಟಿಸುತ್ತಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಿತ್ಯಾ, ತಮ್ಮ ಚಿತ್ರಗಳ ಆಯ್ಕೆಯ ಬಗ್ಗೆ ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಾನು ಅತ್ಯುತ್ತಮ ನಟಿಯಾಗಿ ಆಯ್ಕೆಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಪ್ರಶಸ್ತಿ, ಪುರಸ್ಕಾರಕ್ಕಾಗಿ ಸಿನಿಮಾಗಳಲ್ಲಿ ನಟಿಸುವುದಿಲ್ಲ. ನಾನು ಮಾಡಿದ ಪಾತ್ರ ನನಗೆ ಖುಷಿ ಕೊಟ್ಟರೆ ಸಾಕು. ಜನರು ಮನಸ್ಸಿನಲ್ಲಿಟ್ಟುಕೊಳ್ಳುವ ಪಾತ್ರಗಳನ್ನು ಆಯ್ಕೆ ಮಾಡುತ್ತೇನೆ ಹೊರತು ಭಾರಿ ಹಣ ಸಿಗುವ ಬಿಗ್ ಬಜೆಟ್ ಮಸಾಲಾ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೂ ನಾನು ನಟಿಸುವುದಿಲ್ಲ. ಅಂತಹ ಪಾತ್ರಗಳಲ್ಲಿ ನನಗೆ ಆಸಕ್ತಿ ಇಲ್ಲ. ಒಳ್ಳೆಯ ಪಾತ್ರವಾದರೆ ಸಣ್ಣ ಚಿತ್ರವಾದರೂ ಒಪ್ಪಿಕೊಳ್ಳುತ್ತೇನೆ ಎಂದು ನಿತ್ಯಾ ಮೆನನ್ ಹೇಳಿದ್ದಾರೆ.
ನಿತ್ಯಾ ಮೆನನ್ ಅವರ ಈ ಮಾತುಗಳನ್ನು ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ನಿಮ್ಮ ನಿರ್ಧಾರ ನಮಗೆ ಇಷ್ಟವಾಯಿತು. ಒಳ್ಳೊಳ್ಳೆ ಪಾತ್ರಗಳ ಮೂಲಕ ನಮ್ಮನ್ನು ರಂಜಿಸಿ ಎಂದು ಕೇಳಿಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ನಿತ್ಯಾ ಈಗ ‘ಇಡ್ಲಿ ಕಡಾಯಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಿರುಚಿತ್ರಾಂಬಲಂ ನಂತರ ಧನುಷ್-ನಿತ್ಯಾ ಮೆನನ್ ಮತ್ತೆ ಜೋಡಿಯಾಗಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ತಿರುಚಿತ್ರಾಂಬಲಂ ಮೂಲಕ ನಿತ್ಯಾ ಈ ವರ್ಷ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದಿದ್ದಾರೆ. (ಏಜೆನ್ಸೀಸ್)