ಸಿನಿವಾಣಿ

'ನಿಖಿಲ್ ಎಲ್ಲಿದ್ದೀಯಪ್ಪ' ಎಂದು ಟ್ರೋಲ್​ ಮಾಡಿದವರೀಗ 'ಎಲ್ಲಿದ್ದೀರಪ್ಪಾ ಸ್ಟಾರ್‌ಗಳೇ' ಎನ್ನಲೇಬೇಕಾಗಿದೆ!!

ಬೆಂಗಳೂರು: ಅದು ಜಾಗ್ವಾರ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ. ವೇದಿಕೆ ಮೇಲೆ ನಿಂತಿದ್ದ ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ದೀಯಪ್ಪ ಎಂದು ಪುತ್ರನನ್ನು ವೇದಿಕೆಗೆ ಆಹ್ವಾನಿಸಿದ್ದರು. ನಿಮ್ಮನ್ನು ಮತ್ತು ತಾತನನ್ನು ಪ್ರೀತಿಸುವ ಜನಗಳ ಮಧ್ಯೆ ಇದ್ದೇನಪ್ಪ ಎಂದಿದ್ದರು ನಿಖಿಲ್. ಆ ಒಂದೇ ಒಂದು ಡೈಲಾಗ್ ಟ್ರೋಲ್ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಆಹಾರವಾಗಿತ್ತು. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಅದೇ ಡೈಲಾಗ್ ಪದೇಪದೆ ರಿಂಗಣಿಸಿತ್ತು. ಅಷ್ಟೇ ಅಲ್ಲ ಸ್ವತಃ ಕುಮಾರಸ್ವಾಮಿ ಮತ್ತು ನಿಖಿಲ್‌ಗೆ ಮುಜುಗರವನ್ನುಂಟೂ ಮಾಡಿತ್ತು. ಆದರೆ, ಇಂದಿನ ಪರಿಸ್ಥಿತಿ ಮತ್ತು ಪ್ರಸ್ತುತತೆಗೆ ಹೋಲಿಕೆ ಮಾಡಿದರೆ, ಅಂದಿನ ಆ ಡೈಲಾಗ್ ಹೆಚ್ಚು ಸಮಂಜಸ ಎನಿಸುತ್ತದೆ.

ಹೌದು, ಇಡೀ ವಿಶ್ವ ಕರೊನಾ ವಿರುದ್ಧ ಹೋರಾಡುತ್ತಿದೆ. ಕರ್ನಾಟಕದಲ್ಲೂ ನಿತ್ಯ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರ್ಕಾರವೂ ಅನುದಾನ ರೂಪದಲ್ಲಿ ಹಣವನ್ನು ಬಿಡುಗಡೆ ಮಾಡಿದೆ ಮತ್ತು ಉಳ್ಳವರಿಂದ ಪರಿಹಾರ ನಿಧಿಗೆ ಹಣವನ್ನು ನಿರೀಕ್ಷಿಸುತ್ತಿದೆ. ಅದರಲ್ಲೂ ನಮ್ಮ ಸಿನಿಮಾ ಅಷ್ಟು ಕೋಟಿ ಗಳಿಸಿತು, ಇಷ್ಟು ಕೋಟಿ ಬಾಚಿಕೊಂಡಿತು ಎಂದು ಹೇಳಿಕೊಳ್ಳುವ ಸ್ಟಾರ್ ನಟರೆಲ್ಲರೂ ಈಗ ಮಡದಿ ಮಕ್ಕಳೊಂದಿಗೆ ಕ್ವಾರಂಟೈನ್ ಮೂಡ್‌ನಲ್ಲಿದ್ದಾರೆ. ಸಿನಿಮಾನೇ ಉಸಿರು ಎಂದು ಅದನ್ನೇ ನಂಬಿಕೊಂಡು ಕುಳಿತ ಎಷ್ಟೋ ಕುಟುಂಬಗಳಿಗೆ ಮುಂದೇನು ಎಂಬುದೇ ಚಿಂತೆ. ಹೀಗಿರುವಾಗ ಕಿರುತೆರೆ ಮತ್ತು ಸಿನಿಮಾ ಕಾರ್ಮಿಕರಿಗಾಗಿ 37 ಲಕ್ಷ ಮೊತ್ತವನ್ನು ನಿಖಿಲ್ ಕುಮಾರಸ್ವಾಮಿ ನೀಡಿದ್ದಾರೆ. ಕಷ್ಟಕಾಲದಲ್ಲಿ ಸಿನಿಮಾಮಂದಿಯ ಬೆನ್ನಿಗೆ ನಿಂತಿದ್ದಾರೆ. ನಿಖಿಲ್ ಎಲ್ಲಿದ್ದೀಯಪ್ಪ ಎಂದು ಟ್ರೋಲ್ ಮಾಡಿದವರೆಲ್ಲ ಈಗ ಎಲ್ಲಿದ್ದರಪ್ಪಾ ಸ್ಟಾರ್‌ಗಳೇ ಎನ್ನಬೇಕಾಗಿದೆ! ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ನಟರೇ ಎಲ್ಲಿದ್ದೀರಿ ಎಂಬ ೋಷಣೆ ಶುರುವಾಗಿದೆ.

ಟಾಲಿವುಡ್, ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಲ್ಲಿನ ಸ್ಟಾರ್ ನಟರೆಲ್ಲ ನಾ ಮುಂದು ತಾ ಮುಂದು ಎಂದು ಕೋಟಿ ಕೋಟಿ ಹಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪರಿಹಾರದ ರೂಪದಲ್ಲಿ ನೀಡುತ್ತಿದ್ದಾರೆ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಕರೊನಾ ಮಹಾಮಾರಿ ಆರ್ಭಟ ಶುರುಮಾಡಿ ವಾರ ಕಳೆದರೂ, ಒಬ್ಬೇ ಒಬ್ಬ ಸಿನಿಮಾ ನಟರು ಮುಂದೆ ಬಂದಿಲ್ಲ ಎಂಬುದು ವಿಪರ್ಯಾಸ.