ಹೈದರಾಬಾದ್: ಮಾಜಿ ಮಿಸ್ ಇಂಡಿಯಾ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡು ಜೊತೆಗೆ ಅವುಗಳನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದು ಮಿಸ್ ಇಂಡಿಯಾ ಆಗಿ ಅದ್ಭುತವಾದ ಕಿರೀಟವನ್ನು ಅಲಂಕರಿಸುವ ಕ್ಷಣ, ಸಿನಿಮಾಗಳಲ್ಲಿ ತಮ್ಮ ವೃತ್ತಿಜೀವನ ಮತ್ತು ನಟ ಮಹೇಶ್ ಬಾಬು ಅವರ ಜತೆಗೆ ತಮ್ಮ ಮದುವೆಯ ಕ್ಷಣಗಳವರೆಗೆ ಎಲ್ಲವನ್ನೂ ನೆನಪಿಸಿಕೊಂಡರು. ಇನ್ನು, ಈ ಎಲ್ಲಾ ಸುಂದರ ಕ್ಷಣಗಳನ್ನು ಒಂದು ವಿಡಿಯೋದಲ್ಲಿ ಜೋಡಿಸಿ ಶೇರ್ ಮಾಡಿಕೊಂಡಿದ್ದಾರೆ ನಟಿ ನಮ್ರತಾ. ಆ ವಿಡಿಯೋಗೆ ನಮ್ರತಾ, “ಇಲ್ಲಿಯವರೆಗಿನ ನನ್ನ ಜೀವನ ಪ್ರಯಾಣವನ್ನು ಒಮ್ಮೆ ನೋಡಿ! ತುಂಬಾ ಸಂತೋಷವಾಗಿದೆ... ಇನ್ನೂ ಬೆಳೆಯುವ ಪ್ರಯತ್ನದಲ್ಲಿದ್ದೀನಿ ಮತ್ತು ಭವಿಷ್ಯವು ಹೇಗಿರಲಿದೆ, ಏನಾಗುತ್ತದೆ ಎಂಬುದನ್ನು ನೋಡಲು ಉತ್ಸುಕಳಾಗಿದ್ದೇನೆ” ಎಂಬ ಕ್ಯಾಪ್ಷನ್ ನೀಡಿದ್ದಾರೆ.
ನಮ್ರತಾ ಅವರು ನಟ ಸಲ್ಮಾನ್ ಖಾನ್ ಮತ್ತು ಟ್ವಿಂಕಲ್ ಖನ್ನಾ ಅಭಿನಯದ 'ಜಬ್ ಪ್ಯಾರ್ ಕಿಸೀಸೆ ಹೋತಾ ಹೈ' (1998)ನಲ್ಲಿ ವಿಶೇಷ ಪಾತ್ರದೊಂದಿಗೆ ನಟನಾ ವೃತ್ತಿಯನ್ನು ಆರಂಭಿಸಿದರು. ಅವರು 'ವಾಸ್ತವ್: ದಿ ರಿಯಾಲಿಟಿ' ಮತ್ತು 'ಪುಕಾರ್' ನಂತಹ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ, ನಮ್ರತಾ ಶಿರೋಡ್ಕರ್ 2005ರಲ್ಲಿ ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರನ್ನು ವಿವಾಹವಾಗಿದ್ದು, 2004 ರಲ್ಲಿ 'ರೋಕ್ ಸಕೋ ತೋ ರೋಕ್ ಲೋ' ಎಂಬ ಚಿತ್ರದಲ್ಲಿ ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ನಮ್ರತಾ 1993ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು.
ನಮ್ರತಾ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಆಗಾಗ್ಗೆ ಅವರ ಕುಟುಂಬದ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಬರೋಬ್ಬರಿ 2 ಮಿಲಿಯನ್ ಅನುಯಾಯಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿರುವ ಅವರು ಇತ್ತೀಚೆಗೆ ತಮ್ಮ ಸ್ವಿಟ್ಜರ್ಲೆಂಡ್ ಪ್ರವಾಸದಿಂದ ಮಗಳು ಸಿತಾರಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದು, ಆ ಫೋಟೋ ವೈರಲ್ ಆಗಿದೆ. ಸದ್ಯ, ಅವರ ಜೀವನದ ಬಗ್ಗೆ ಹಂಚಿಕೊಂಡಿರುವ ಈ ವಿಡಿಯೋ ಮೇಲೆ ಕೂಡ 40,000ಕ್ಕೂ ಹೆಚ್ಚು ಲೈಕ್ಸ್ ಇವೆ.