ಬೆಂಗಳೂರು: ಇತ್ತೀಚೆಗಷ್ಟೇ ವೆಂಕಟ್ ಭಾರದ್ವಾಜ್ ನಿರ್ದೇಶನದ 'ಶ್ರೀರಂಗ' ಎಂಬ ಚಿತ್ರ ಬಿಡುಗಡೆಯಾಯಿತು. ಈಗ ಅವರು 'ನಗುವಿನ ಹೂಗಳ ಮೇಲೆ' ಎಂಬ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.
ವಿಶೇಷವೆದರೆ, ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಲಂಡನ್ನಲ್ಲಿ ಅಳವಡಿಸಲಾಗಿದೆ. ಚಿತ್ರದ ಸಂಗೀತ ನಿರ್ದೇಶಕ ಲವ್ ಪ್ರಾನ್ ಮೆಹತಾ ಲಂಡನ್ನ ಮೆಲಿಫ್ಲುಯಸ್ ಸ್ಟುಡಿಯೋದಲ್ಲಿ ಚಿತ್ರದ ಹಿನ್ನೆಲೆ ಸಂಗೀತ, ಎಫೆಕ್ಟ್ಸ್, ಫೈನಲ್ ಮಿಕ್ಸಿಂಗ್ ಸುಸೂತ್ರವಾಗಿ ಮುಗಿಸಿದ್ದು 7.1 ಸೌಂಡ್ನಲ್ಲಿ ಚಿತ್ರ ಮೂಡಿ ಬಂದಿದೆ.
ತಮ್ಮ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೂ ವೆಂಕಟ್ ಭಾರದ್ವಾಜ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಈ ಚಿತ್ರದ ಮೂಲಕ ಅಭಿಷೇಕ್ ರಾಮದಾಸ್ ಮತ್ತು ಶರಣ್ಯಾ ಶೆಟ್ಟಿ ಎಂಬ ಹೊಸ ನಾಯಕ-ನಾಯಕಿಯನ್ನು ವೆಂಕಟ್ ಪರಿಚಯಿಸಿದ್ದಾರೆ. ಅವರೊಂದಿಗೆ ಬಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್ ಮುಂತಾದವರು ನಟಿಸಿದ್ದಾರೆ.
ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ನಡಿ ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧಾ ಮೋಹನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಕನ್ನಡ ಚಿತ್ರವಾಗಿದೆ. ಅಭಿಷೇಕ್ ಅಯ್ಯಂಗಾರ್ ಅವರ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ ಈ ಚಿತ್ರಕ್ಕಿದೆ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.