Rukmini Vasanth : ಮುತ್ತಿನ ನಗರಿ ಹೈದಾರಾಬಾದ್ನಲ್ಲಿ ನಡೆದ ಕಾಂತಾರ ಚಾಪ್ಟರ್-1 ಪ್ರೀ ರಿಲೀಸ್ ಈವೆಂಟ್ ಸಂದರ್ಭದಲ್ಲಿ ನಟಿ ರುಕ್ಮಿಣಿ ವಂಸತ್ ಬಗ್ಗೆ ಟಾಲಿವುಡ್ ನಿರ್ಮಾಪಕ ರವಿಶಂಕರ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಜೂನಿಯರ್ ಎನ್‌ಟಿಆರ್ ಹಾಗೂ ರಿಷಭ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮೈತ್ರಿ ಮೂವಿ ಮೇಕರ್ಸ್ನ ರವಿಶಂಕರ್ ಅವರು ರುಕ್ಮಿಣಿಯನ್ನು "ಅಸಾಧಾರಣ ಅಭಿನೇತ್ರಿ" ಎಂದು ಹೊಗಳಿದರು. ಇಷ್ಟೇ ಆಗಿದ್ದರೆ ಅವರ ಮಾತುಗಳು ವಿವಾದವಾಗುತ್ತಿರಲಿಲ್ಲ ಆದರೆ, ಜೂನಿಯರ್ ಎನ್‌ಟಿಆರ್ ಅವರ ನಟನಾ ಸಾಮರ್ಥ್ಯದ ಜೊತೆಗೆ ರುಕ್ಮಿಣಿ ಅವರನ್ನು ಹೋಲಿಕೆ ಮಾನತನಾಡಿದ್ದು ವಿವಾದಕ್ಕೆ ಗುರಿಯಾಗಿದೆ.
ಎನ್‌ಟಿಆರ್ ಅವರ ಪ್ರತಿಭೆಗೆ ಹೊಂದಿಕೆಯಾಗುವ ನಾಯಕಿಗಾಗಿ ನಾವು ತಿಂಗಳುಗಟ್ಟಲೆ ಹುಡುಕಿದೆವು. ಅಂತಿಮವಾಗಿ ನಾವು ರುಕ್ಮಿಣಿಯಲ್ಲಿ ಆ ಪ್ರತಿಭೆಯನ್ನು ಕಂಡುಕೊಂಡೆವು. ಆಕೆ ಅಸಾಧಾರಣಳು. ಬಹುಶಃ ಎನ್‌ಟಿಆರ್ ಮಟ್ಟದಲ್ಲಿ ಇಲ್ಲದಿರಬಹುದು ಆದರೆ, ಕನಿಷ್ಠ 80 ರಷ್ಟು ಅಭಿನಯವನ್ನು ಆಕೆ ನೀಡಬಲ್ಲಳು ಎಂದು ನಾವು ಭಾವಿಸುತ್ತೇವೆ ಎಂದು ರವಿಶಂಕರ್ ಅವರು ಹೇಳಿದರು.
ರವಿಶಂಕರ್ ಅವರು ಈ ಹೇಳಿಕೆ ಮೆಚ್ಚುಗೆಯ ಉದ್ದೇಶವನ್ನು ಹೊಂದಿದ್ದರು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಗರಿಯಾಗಿದೆ. ಈ ಒಂದು ಹೋಲಿಕೆ ರುಕ್ಮಿಣಿಯವರ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಿದೆ ಮತ್ತು ಆಕೆಯ ಸಾಧನೆಗಳನ್ನು ಕಡಿಮೆ ಅಂದಾಜು ಮಾಡಿದಂತಿದೆ ಎಂದು ಅನೇಕ ನೆಟ್ಟಿಗರು ಭಾವಿಸಿದ್ದಾರೆ. ನಾಯಕನನ್ನು ವೈಭವೀಕರಿಸುವ ಭರದಲ್ಲಿ ನಟಿಯನ್ನು "ಕಡಿಮೆ" ಅಂದಾಜು ಏಕೆ ಮಾಡಬೇಕು ಎಂದು ರುಕ್ಮಿಣಿ ಅವರ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ನೆಟ್ಟಿಗನೊಬ್ಬ ತೆಲುಗಿನಲ್ಲಿ “ಮೀ ಹೀರೋ ನಿ ಲೆಪುಕೋ ಅಂತೇ ಗಣಿ ಮಾ ರುಕ್ಕು ನಿ ಎಂಧುಕು ಠಕ್ಕುವ ಚೇಸಿ ಮಾತಲ್ದಮ್? (ನಿಮ್ಮ ನಾಯಕನನ್ನು ಹೈಪ್ ಮಾಡಲು ರುಕ್ಕುವನ್ನು ಅವಮಾನಿಸುವ ಅಗತ್ಯವಿಲ್ಲ) ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ಅಗೌರವ ಚೆಯ್ಯದಂ ಎಂದು? (ಅವಳನ್ನು ಏಕೆ ಅಗೌರವಿಸುವುದು?) ಎಂದು ಪ್ರಶ್ನಿಸಿದ್ದಾರೆ.
ಅಂದಹಾಗೆ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸ್ಥಿರವಾಗಿ ಪ್ರಾಮುಖ್ಯತೆ ಗಳಿಸಿರುವ ರುಕ್ಮಿಣಿ, ಇತ್ತೀಚೆಗೆ ಎ.ಆರ್. ಮುರುಗದಾಸ್ ಅವರ ಮದರಾಸಿ ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಕಾಣಿಸಿಕೊಂಡರು. ಇನ್ನು ಅಕ್ಟೋಬರ್ 2 ರಂದು ಬಿಡುಗಡೆಯಾಗಲಿರುವ ಕಾಂತಾರ ಅಧ್ಯಾಯ 1 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಅವರ ಬಹು ನಿರೀಕ್ಷಿತ ಸಿನಿಮಾದ ಭಾಗವಾಗಿದ್ದಾರೆ.
ಟೀಕೆಗಳ ಬಗ್ಗೆ ರವಿಶಂಕರ್ ಇನ್ನೂ ಪ್ರತಿಕ್ರಿಯಿಸದಿದ್ದರೂ, ಈ ಘಟನೆಯು ಚಲನಚಿತ್ರೋದ್ಯಮದಲ್ಲಿ ಮಹಿಳಾ ಪ್ರತಿಭೆಯನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದರ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಹೀರೋಗಳ ಮುಂದೆ ನಾಯಕಿಯರನ್ನು ಕೀಳಾಗಿ ಕಾಣುವ ಮನಸ್ಥಿತಿ ಇದಾಗಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.
ಅಂದಹಾಗೆ, ಕಾಂತಾರ ತೆಲುಗು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಿಷಭ್ ಶೆಟ್ಟಿ ಅವರ ಕನ್ನಡ ಭಾಷಣವು ಕೂಡ ತೀವ್ರ ವಿರೋಧವನ್ನು ಎದುರಿಸಿತು. ಏಕೆಂದರೆ, ಅನೇಕ ತೆಲುಗು ಜನರು "ಕಾಂತಾರವನ್ನು ನಿಷೇಧಿಸಿ" ಮತ್ತು "ಕಾಂತಾರವನ್ನು ಬಹಿಷ್ಕರಿಸಿ" ಎಂದು ಒತ್ತಾಯಿಸಿದ್ದು, ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಕೂಡ ಆಗಿದೆ. (ಏಜೆನ್ಸೀಸ್)