ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟನೆಯಲ್ಲಿ ಮಾತ್ರವಲ್ಲ ನಿರ್ದೇಶನದಲ್ಲೂ ಹೆಣ್ಣುಮಕ್ಕಳು ಎತ್ತಿದ ಕೈ. ಕೆಲ ದಿನಗಳ ಹಿಂದಷ್ಟೇ ಸಿಂಧೂ ಶ್ರೀನಿವಾಸಮೂರ್ತಿ ನಿರ್ದೇಶನದ "ಆಚಾರ್ ಆ್ಯಂಡ್ ಕೋ' ರಿಲೀಸ್ ಆಗಿತ್ತು. ಇದೀಗ ಮತ್ತೊಬ್ಬ ನಿರ್ದೇಶಕಿ ಹೊಸ ಚಿತ್ರದೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಹೆಸರು ಸಿಂಧು ಗೌಡ. 20ಕ್ಕೂ ಹೆಚ್ಚು ಸಿನಿಮಾಗಳಿಗೆ ಆ್ಯಕ್ಷನ್&ಕಟ್ ಹೇಳಿದ್ದ ನಿರ್ದೇಶಕ ರಾಜ್ ಕಿಶೋರ್ ಪುತ್ರಿ ಸಿಂಧು.
ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸಿಂಧು, ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದೀಗ ಚಲನಚಿತ್ರ ನಿರ್ದೇಶಕಿಯಾಗಿದ್ದು, "ನಾನೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ. "ಆ್ಯಪಲ್ ಕಟ್' ಐವರು ಗೆಳೆಯರ ಸುತ್ತ ನಡೆಯುವ ಕಥೆ. ಮಾನವಶಾಸ್ತ್ರದ ಅಂಶವನ್ನೂ ಕಥೆಯಲ್ಲಿ ಸೇರಿಸಿದ್ದೇವೆ. ಆಸ್ಪತ್ರೆಯೊಂದರ ಅನುಮತಿ ಪಡೆದು ಶವವನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಸೂರ್ಯ ಗೌಡ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. "ನಾನಿಲ್ಲಿ ಸತ್ಯ ಎಂಬ ಮಾನವಶಾಸ್ತ್ರ ಪ್ರೊೆಸರ್ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿ ಕಥೆಯಷ್ಟೇ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ' ಎಂದರು.
ನಾಯಕಿ ಅಶ್ವಿನಿ ಪೋಲೆಪಲ್ಲಿ, "ನಾನು ಮೂಲತಃ ಬಾಗೇಪಲ್ಲಿ ಹುಡುಗಿ. ಈ ಚಿತ್ರದಲ್ಲಿ ಸೈಕಾಲಜಿ ವಿದ್ಯಾರ್ಥಿನಿಯಾಗಿದ್ದೇನೆ' ಎಂದರು. ಉಳಿದಂತೆ ಅಪ್ಪಣ್ಣ, ಅಭಿಜಿತ್, ಮೀನಾ, ಬಾಲು ರಾಜವಾಡಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ, ರಾಜೇಶ್ ಛಾಯಾಗ್ರಹಣವಿರಲಿದೆ.