ಮುಂಬೈ: 30 ವರ್ಷಗಳ ಹಿಂದೆ ಬಿಡುಗಡೆಯಾದ 'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಭಾಗ್ಯಶ್ರೀ. ಈ ಚಿತ್ರದ ನಂತರ ಅವರು ಬಾಲಿವುಡ್ನ ಅತ್ಯಂತ ಬೇಡಿಕೆಯ ನಟಿಯಾದರು. ಆದರೆ, ಭಾಗ್ಯಶ್ರೀ ತಮ್ಮತ್ತ ಬಂದ ಎಲ್ಲಾ ಅವಕಾಶಗಳನ್ನು ಒಪ್ಪಲಿಲ್ಲ. ತಮ್ಮತ್ತ ಬಂದ ಅದೆಷ್ಟೋ ಅವಕಾಶಗಳನ್ನು ಅವರು ರಿಜೆಕ್ಟ್ ಮಾಡಿದರು.
ಅದಕ್ಕೆ ಕಾರಣವೂ ಇದೆ. ಅಷ್ಟರಲ್ಲಿ ಹಿಮಾಲಯ ದಾಸಾನಿ ಜತೆಗೆ ಅವರ ಮದುವೆ ಫಿಕ್ಸ್ ಆಗಿತ್ತು. ಹಿಮಾಲಯ ಅಲ್ಲದೆ ಬೇರೆ ಯಾವ ಹೀರೋ ಜತೆಗೂ ನಟಿಸುವುದಿಲ್ಲ ಎಂಬ ಕರಾರನ್ನು ಅವರು ಹಾಕಿದರು. ಕೆಲವರು ಹಿಮಾಲಯ ಮತ್ತು ಭಾಗ್ಯಶ್ರೀ ಅವರ ಜೋಡಿಯ ಚಿತ್ರಗಳನ್ನು ಮಾಡಿದರು. ಆದರೆ, 'ಮೈನೇ ಪ್ಯಾರ್ ಕಿಯಾ' ಚಿತ್ರದಷ್ಟು ಯಾವ ಚಿತ್ರವೂ ಯಶಸ್ವಿಯಾಗಲಿಲ್ಲ. ಕೊನೆಗೆ, ಭಾಗ್ಯಶ್ರೀ ಅವರನ್ನು ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಸಂಪರ್ಕಿಸುವುದನ್ನೇ ಬಿಟ್ಟುಬಿಟ್ಟರು.
ಈಗ್ಯಾಕೆ ಈ ವಿಷಯ ಎಂದರೆ, 'ಮೈನೇ ಪ್ಯಾರ್ ಕಿಯಾ' ಬಿಡುಗಡೆಯಾಗಿ ಇದೀಗ 31 ವರ್ಷಗಳಾಗಿವೆ. ಈ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೆರಿಯರ್ನ ಉತ್ತುಂಗದಲ್ಲಿರುವಾಗಲೇ ಮದುವೆಯಾಗಿ ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರ ಕುರಿತಾಗಿ ಅವರು ಮಾತನಾಡಿದ್ದಾರೆ.
'ನನ್ನ ಗಂಡನಿಗೆ ಅದೆಷ್ಟು ಜನ ಶಾಪ ಹಾಕಿದ್ದಾರೋ ಗೊತ್ತಿಲ್ಲ. ಅದರಲ್ಲೂ ನಾನು ಮದುವೆಯಾದ ನಂತರ ಬಾಲಿವುಡ್ಗೆ ಗುಡ್ಬೈ ಹೇಳಿಬಿಟ್ಟೆ. ಈ ಸಂದರ್ಭದಲ್ಲಿ ನನ್ನ ಹಲವು ಅಭಿಮಾನಿಗಳು ಬೇಸರಗೊಂಡಿದ್ದರು. ಎಲ್ಲರೂ ಹಿಮಾಲಯ್ಗೆ ಬಯ್ಯುತ್ತಿದ್ದರು. ಆ ಸಂದರ್ಭದಲ್ಲಿ ಅವರನ್ನು ಪ್ರೀತಿಸುತ್ತಿದ್ದುದು ನಾನೊಬ್ಬಳೇ ಇರಬೇಕು. ಆದರೆ, ನಾನು ಮದುವೆಯಾಗಿದ್ದಕ್ಕೂ ಕಾರಣವಿದೆ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಮದುವೆಯಾಗುವುದಕ್ಕೆ ತೀರ್ಮಾನಿಸಿದ್ದೆವು. ಇಂತಹ ಸಂದರ್ಭದಲ್ಲಿ ಯಾರು ತಾನೆ, ತನ್ನ ಗರ್ಲ್ಫ್ರೆಂಡ್ ಬೇರೆಯವರ ಜೊತೆಗೆ ಹಾಡಿ-ಕುಣಿಯುವುದಕ್ಕೆ ಇಷ್ಟಪಡುತ್ತಾರೆ? ಮುಂದೆ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ ನಾನು ಚಿತ್ರರಂಗದಿಂದ ದೂರಾದೆ' ಎಂದು ಹೇಳಿಕೊಂಡಿದ್ದಾರೆ.
ಅದಾಗಿ ಎಷ್ಟೋ ವರ್ಷಗಳ ನಂತರ ಭಾಗ್ಯಶ್ರೀ ನಟನೆಗೆ ವಾಪಸ್ಸಾಗಿದ್ದು, ಇದೀಗ ಪ್ರಭಾಸ್ ಅಭಿನಯದ 'ರಾಧೇ ಶ್ಯಾಮ್' ಮತ್ತು ಕಂಗನಾ ರಣಾವತ್ ಅಭಿನಯದ 'ಥಲೈವಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾಗ್ಯಶ್ರೀ ಮತ್ತು ಹಿಮಾಲಯ್ ಅವರ ಮಗ ಅಭಿಮನ್ಯು ದಾಸಾನಿ ಸಹ ನಟನಾಗಿದ್ದು, ಕಳೆದ ವರ್ಷ ಬಿಡಗುಡೆಯಾಗಿದ್ದು, 'ಮರ್ದ್ ಕೋ ದರ್ದ್ ನಹೀ ಹೋತಾ' ಚಿತ್ರದಲ್ಲಿ ನಟಿಸಿದ್ದರು.