ಮರ್ಡರ್ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಆರ್ಜಿವಿ ಪ್ರತಿಕ್ರಿಯಿಸಿದ್ದಾರೆ. 2018ರಲ್ಲಿ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆ ಆಧಾರಿತ ಸಿನಿಮಾ ಪೋಸ್ಟರ್ ಅನ್ನು ಇತ್ತಿಚೆಗಷ್ಟೇ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಿದ್ದರು. ಆ ಪೋಸ್ಟರ್ ಬಿಡುಗಡೆ ಬೆನ್ನಲ್ಲೇ ಪ್ರಣಯ್ ತಂದೆ ಬಾಲಾಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಈ ಬೆಳವಣಿಗೆಯ ಬಗ್ಗೆ ವರ್ಮಾ ಪ್ರತಿಕ್ರಿಯಿಸಿದ್ದಾರೆ.
‘ಮರ್ಡರ್ ಸಿನಿಮಾ ಒಂದಷ್ಟು ನೈಜ ಘಟನೆ ಮತ್ತು ಒಂದಷ್ಟು ಘಟನೆಗಳಿಂದ ಸ್ಫೂರ್ತಿ ಪಡೆದು ಸಿದ್ಧವಾದ ಸಿನಿಮಾ ಆಗಿದೆಯೇ ಹೊರತು, ಸತ್ಯವನ್ನಲ್ಲ. ಅದೇ ರೀತಿ ಸಿನಿಮಾದಲ್ಲಿ ಯಾವುದೇ ಜಾತಿಯನ್ನು ಬಳಕೆ ಮಾಡಿಕೊಂಡಿಲ್ಲ’ ಎಂದು ಆರ್ಜಿವಿ ಟ್ವಿಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
ಹೌದು, ಆರ್ಜಿವಿ ನಿರ್ದೇಶನದ ಮರ್ಡರ್ ಚಿತ್ರಕ್ಕೆ ಪ್ರಣಯ್ ತಂದೆ ಬಾಲಾಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿ, ಆರ್ಜಿವಿ ಚಿತ್ರ ಪ್ರಣಯ್ ಕೊಲೆ ಪ್ರಕರಣದ ಮೇಲೆ ಪರಿಣಾಮ ಬೀಳಲಿದೆ ಎಂದು ಪ್ರಣಯ್ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ಬಾಲಾಸ್ವಾಮಿ ಅವರ ಅರ್ಜಿ ಪುರಸ್ಕರಿಸಿದ ನಲ್ಗೊಂಡ ವಿಶೇಷ ಪರಿಶಿಷ್ಟ ವರ್ಗ/ಪಂಗಡ ನ್ಯಾಯಾಲಯ, ಮಿರಿಯಾಲಗುಡ ಪೊಲೀಸ್ ಠಾಣೆಗೆ ನಿರ್ದೇಶಕ ಆರ್ಜಿವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಿತ್ತು.
ಕಳೆದ ಅಪ್ಪಂದಿರ ದಿನದಿಂದು ಆರ್ಜಿವಿ “ಮರ್ಡರ್” ಹೆಸರಿನ ಮುಂದಿನ ಚಿತ್ರದ ಪೋಸ್ಟರ್ ಅನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬರೆದುಕೊಂಡಿದ್ದ ವರ್ಮಾ, ಅಮೃತಾ ರಾವ್ ಹಾಗೂ ಮಾರುತಿ ರಾವ್ ಜೀವನಾಧಾರಿತ ಚಿತ್ರವು ಒಂದು ಮನಕಲಕುವ ಕತೆಯಾಗಲಿದೆ. ಮಗಳನ್ನು ತುಂಬಾ ಪ್ರೀತಿಸುವ ತಂದೆಯ ಅಪಾಯಕಾರ ಸಾಹಸಗಳು ಪ್ರೇಕ್ಷಕರ ಹೃದಯವನ್ನು ತಟ್ಟಲಿದೆ ಎಂದು ಅಪ್ಪಂದಿರ ದಿನದಂದೇ ಪೋಸ್ಟರ್ ಬಿಡುಗಡೆ ಮಾಡಿ, ಸ್ಯಾಡ್ ಫಾದರ್ಸ್ ಡೇ ಎಂದು ಬರೆದುಕೊಂಡಿದ್ದರು. (ಏಜೆನ್ಸೀಸ್)