ಸಿನಿವಾಣಿ

ಕ್ಯಾಬ್​ ಡ್ರೈವರ್​ ವಿರುದ್ಧ ದೂರು ಕೊಟ್ರಂತೆ ಮುಮೈತ್​ ಖಾನ್​ ... ಯಾಕೆ?

manjunathktgns

ಹೈದರಾಬಾದ್​: ಒಂದು ಕಾಲಕ್ಕೆ ಐಟಂ ಡ್ಯಾನ್ಸ್​ಗಳಿಗೆ ಸಖತ್ ಫೇಮಸ್​ ಆಗಿದ್ದವರು ಮಾದಕ ನಟಿ ಮುಮೈತ್​ ಖಾನ್​. ಬರೀ ತಮಿಳು, ತೆಲುಗಲ್ಲದೆ, ಕನ್ನಡ, ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ಮುಮೈತ್​ ಖಾನ್​, ಇತ್ತೀಚಿನ ವರ್ಷಗಳಲ್ಲಿ ಎಲ್ಲಿದ್ದರೋ, ಏನು ಮಾಡುತ್ತಿದ್ದರೋ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ಹೀಗೆ ಅದೆಲ್ಲೋ ಮಾಯವಾಗಿದ್ದ ಮುಮೈತ್​ ಇದೀಗ ಸುದ್ದಿಯಲ್ಲಿದ್ದಾರೆ. ಗುರುವಾರ ಬೆಳಿಗ್ಗೆ ಸೀದಾ ಹೈದರಾಬಾದ್​ನ ಪಂಜಗುಟ್ಟ ಪೊಲೀಸ್ಟ್​ ಸ್ಟೇಷನ್​ಗೆ ಹೋದ ಮುಮೈತ್​, ರಾಜು ಎಂಬ ಕ್ಯಾಬ್​ ಡ್ರೈವರ್​ ಮೇಲೆ ದೂರು ಕೊಟ್ಟುಬಂದಿದ್ದಾರೆ.

ದೂರು ಕೊಡುವಂತದ್ದೇನು ಮಾಡಿದ್ದರು ರಾಜು ಎಂಬ ಪ್ರಶ್ನೆ ನಿಮಗಾದರೂ ಬರಬಹುದು. ವಿಷಯವೇನೆಂದರೆ, ಮುಮೈತ್​ ಖಾನ್​ ಮೇಲೆ ರಾಜು ಸುಳ್ಳು ಆರೋಪಗಳನ್ನು ಹೊರಿಸಿದ್ದರಂತೆ. ಇದರಿಂದ ಬೇಸರಗೊಂಡಿರುವ ಮುಮೈತ್​, ಸೀದಾ ರಾಜು ವಿರುದ್ಧ ಒಂದು ದೂರು ದಾಖಲಿಸಿ ಬಂದಿದ್ದಾರೆ.

ಇಷ್ಟಕ್ಕೂ ರಾಜುಗೂ ಮುಮೈತ್​ಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವೇ. ಮುಮೈತ್​ ಖಾನ್​ ಇತ್ತೀಚೆಗೆ ಗೋವಾಗೆ ಹೋಗಿದ್ದಾರೆ. ಅದೂ ರಾಜು ಕಾರಿನಲ್ಲಿ. ವಾಪಸ್ಸು ಬಂದ ಮೇಲೆ, ಮುಮೈತ್​ ವಿರುದ್ಧ ರಾಜು, ಸೋಷಿಯಲ್​ ಮೀಡಿಯಾದಲ್ಲಿ ಒಂದಿಷ್ಟು ಆರೋಪಗಳನ್ನು ಹೊರಿಸಿದ್ದಾರೆ, ತಮಗೆ ಮುಮೈತ್​ 15 ಸಾವಿರ ಕೊಡಬೇಕಿತ್ತು, ಕೊಡದೇ ನಾಮ ಹಾಕಿಬಿಟ್ಟರು ಎಂದು ಬೇಸರಿಸಿಕೊಂಡಿದ್ದಾರೆ.

ಈ ವಿಷಯ ಮುಮೈತ್​ ಕಿವಿಗೆ ಬೀಳುತ್ತಿದ್ದಂತೆಯೇ ಅವರು ಕೆಂಡಾಮಂಡಲರಾಗಿದ್ದಾರೆ. ಸೀದಾ ಹೋಗಿ ಪಂಜುಗುಟ್ಟ ಪೊಲೀಸ್​ ಸ್ಟೇಶನ್​ಗೆ ರಾಜು ವಿರುದ್ಧ ದೂರುಕೊಟ್ಟಿದ್ದಾರೆ. ದೂರು ಸ್ವೀಕರಿಸಿರುವುದನ್ನು ಒಪ್ಪಿಕೊಂಡಿರುವ ಪೊಲೀಸರು, ಈ ಕುರಿತು ತನಿಖೆ ನಡೆಸಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.