ಬೆಂಗಳೂರು: ಬಿಡುಗಡೆ ಆಗಬೇಕೆಂದಿದ್ದ ಸಿನಿಮಾಗಳು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟವು. ಆದರೆ, ‘ಆಗಿದ್ದಾಗಲಿ ನಾವು ಬರುವುದು ಖಚಿತ..’ ಎಂದು ಈ ಹಿಂದೆಯೇ ಹೇಳಿದ್ದ ‘ಲಂಕೆ’ ಚಿತ್ರತಂಡದವರು, ಇನ್ನೇನು ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಸೆ. 10ರಂದು ಗಣೇಶ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ರಾಜ್ಯಾದ್ಯಂತ 200ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ವರಮಹಾಲಕ್ಷ್ಮೀ ಹಬ್ಬದ ದಿನವೇ ‘ದುನಿಯಾ’ ವಿಜಯ್ ಅಭಿನಯದ ‘ಸಲಗ’, ಯೋಗಿ ಅಭಿನಯದ ‘ಲಂಕೆ’, ಸೂರಜ್ ಗೌಡ ನಟನೆಯ ‘ನಿನ್ನ ಸನಿಹಕೆ’ ಸೇರಿ ಹಲವು ಸಿನಿಮಾಗಳು ತೆರೆಗೆ ಬರುವುದಾಗಿ ಹೇಳಿಕೊಂಡಿದ್ದವು. ಆದರೆ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲಾಗಿತ್ತು.
ಇದೀಗ ಶೇ. 50ರಷ್ಟು ಆಸನ ಭರ್ತಿಯ ನಡುವೆಯೇ ‘ಲಂಕೆ’ ಬಿಡುಗಡೆ ಆಗುತ್ತಿದೆ. ರಾಮ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ‘ಲೂಸ್ ಮಾದ’ ಯೋಗಿ ನಾಯಕನಾಗಿ ನಟಿಸಿದರೆ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಪಟೇಲ್ ಶ್ರೀನಿವಾಸ್, ಸುರೇಖ ರಾಮ್ ಪ್ರಸಾದ್ ಬಂಡವಾಳ ಹೂಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಕಾರ್ತಿಕ್ ಶರ್ಮಾ ಸಂಗೀತ ಚಿತ್ರಕ್ಕಿದೆ.