ಚೆನ್ನೈ: ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಮಲಯಾಳಂ ನಟ ಮೋಹನ್ ಲಾಲ್ ಸಹ ಚಿತ್ರಕ್ಕೆ ಸೇರ್ಪಡೆಯಾಗಿದ್ದು, ಅವರು ಸಹ ಒಂದು ವಿಶೇಷ ಪಾತ್ರ ಮಾಡಲಿದ್ದಾರಂತೆ.
ಹೌದು, 'ಜೈಲರ್' ಚಿತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಾರೆ ಎಂಬ ಹಾಟ್ ಸುದ್ದಿಯೊಂದು ಇದೀಗ ಕೇಳಿ ಬಂದಿದೆ. ಇದೊಂದು ಅತಿಥಿ ಪಾತ್ರವಾಗಿದ್ದು, ಎರಡ್ಮೂರು ದಿನಗಳ ಕಾಲ ಮೋಹನ್ ಲಾಲ್ ಭಾಗದ ಚಿತ್ರೀಕರಣ ನಡೆಯಲಿದೆಯಂತೆ. ಮೂಲಗಳ ಪ್ರಕಾರ, ಜ.8ರಿಂದ ರಜನಿಕಾಂತ್ ಮತ್ತು ಮೋಹನ್ ಲಾಲ್ ಅವರ ಭಾಗದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.
‘'ಜೈಲರ್' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ಕೆಲವು ತಿಂಗಳುಗಳೇ ಆಗಿದ್ದು, ಶೇ. 50ರಷ್ಟು ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆಯಂತೆ. ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಚಿತ್ರೀಕರಣದಲ್ಲಿ ಶಿವಣ್ಣ ಭಾಗವಹಿಸಿ, ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಮೋಹನ್ ಲಾಲ್ ಸಹ ಸೇರ್ಪಡೆಯಾಗಿದ್ದು, ದಕ್ಷಿಣ ಭಾರತದ ಚಿತ್ರರಂಗದ ಮೂರು ಪ್ರಮುಖ ಸ್ಟಾರ್ ನಟರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
ಇದನ್ನೂ ಓದಿ: ನೀವು ಮನಸ್ಸು ಮಾಡಿದರೆ ‘ಬಾಯ್ಕಾಟ್ ಬಾಲಿವುಡ್’ ತಡೆಯಬಹುದು … ಯೋಗಿ ಆದಿತ್ಯನಾಥ್ಗೆ ಸುನೀಲ್ ಶೆಟ್ಟಿ ಮನವಿ
'ಜೈಲರ್' ಚಿತ್ರವು ರಜನಿಕಾಂತ್ ಅಭಿನಯದ 169ನೇ ಚಿತ್ರವಾಗಿದ್ದು, ಅವರ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್ ಮೋಹನ್ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಿಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.