ಚೆನ್ನೈ: ದಕ್ಷಿಣ ಭಾರತದ ನಾಲ್ಕು ಭಾಷೆಗಳ ನೂರಾರು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀನಾ, ಇದೀಗ ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನು ಕಳೆದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರಜೀವನದುದ್ದಕ್ಕೂ ಸಹಕರಿಸಿ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ವೀಡಿಯೋ ಮೂಲಕ ಕೃತಜ್ಱತೆಗಳನ್ನು ಸಲ್ಲಿಸಿದ್ದಾರೆ.
ಅಲ್ಲ, ಮೀನಾಗೆ ಹೆಚ್ಚೆಂದರೆ 45-46 ವರ್ಷಗಳಿರಬಹುದು. ಹೀಗಿರುವಾಗ, ಚಿತ್ರರಂಗದಲ್ಲೇ 40 ವರ್ಷಗಳನ್ನು ಪೂರೈಸುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜ. ಮೀನಾ ಚಿತ್ರರಂಗಕ್ಕೆ ಬಂದಿದ್ದು ಬಾಲನಟಿಯಾಗಿ. 1981ರಲ್ಲಿ ಬಿಡುಗಡೆಯಾದ ನೆಂಜಂಗಳ್ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅವರು, ನಂತರದ ವರ್ಷಗಳಲ್ಲಿ ನಾಯಕಿಯಾಗಿ, ಇದೀಗ ಪೋಷಕ ನಟಿಯಾಗಿದ್ದಾರೆ.
1995ರಲ್ಲಿ ಬಿಡುಗಡೆಯಾದ ಪುಟ್ನಂಜ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಮೀನಾ, ನಂತರದ ವರ್ಷಗಳಲ್ಲಿ ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ, ಗೌಡ್ರು, ಮಹಾಸಾಧ್ವಿ ಮಲ್ಲಮ್ಮ, ಮೈ ಆಟೋಗ್ರಾಫ್ ಮತ್ತು ಹೆಂಡ್ತೀರ ದರ್ಬಾರ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದ ಜನಪ್ರಿಯ ನಾಯಕರ ಜತೆಗೆ ನಟಿಸಿದ್ದಷ್ಟೇ ಅಲ್ಲ, ದಕ್ಷಿಣ ಭಾರತದ ಜನಪ್ರಿಯ ಹೀರೋಗಳಾದ ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಕಮಲ್ ಹಾಸನ್, ಬಾಲಕೃಷ್ಣ ಮುಂತಾದವರೊಂದಿಗೆ ನಟಿಸಿದ್ದಾರೆ.