ಬೆಂಗಳೂರು: ಗುರುಪ್ರಸಾದ್ ನಿರ್ದೇಶನದ, ಜಗ್ಗೇಶ್ ಅಭಿನಯದ 'ಮಠ' ಚಿತ್ರವು ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು. ಈಗ ಇದೇ ಹೆಸರಿನಲ್ಲಿ ಇನ್ನೊಂದು ಹೊಸ ಚಿತ್ರ ನ. 18ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲೂ ಗುರುಪ್ರಸಾದ್ ಇದ್ದಾರೆ. ಆದರೆ, ನಿರ್ದೇಶಕರಾಗಲ್ಲ, ನಟರಾಗಿ ಮಾತ್ರ ಕಾಣಿಸಿಕೊಂಡಿದ್ದಾರೆ.
ಹೌದು, ಗುರುಪ್ರಸಾದ್ ಮತ್ತೊಮ್ಮೆ 'ಮಠ'ದೊಂದಿಗೆ ಗುರುತಿಸಿಕೊಂಡಿದ್ದು, ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ತಬಲಾ ನಾಣಿ, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಬಿರಾದಾರ್, ಮಂಡ್ಯ ರಮೇಶ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಇದಕ್ಕೂ ಮುನ್ನ 'ಪುಟಾಣಿ ಸಫಾರಿ', 'ವರ್ಣಮಯ', 'ವಾಸಂತಿ ನಲಿದಾಗ' ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೆಂಶಿ, ಈ ಬಾರಿ ಇನ್ನೊಂದು ವಿಭಿನ್ನ ಕಥೆಯೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವನ್ನು 25 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ವಿ ಆರ್ ಕಂಬೈನ್ಸ್ ಬ್ಯಾನರ್ನಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೀವನ್ ಗೌಡ ಛಾಯಾಗ್ರಾಹಣ, ಶ್ರೀ ಗುರು ಸಂಗೀತ ಸಂಯೋಜನೆ ಇರುವ ಈ ಚಿತ್ರಕ್ಕೆ ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್ ಮತ್ತು ಗೌಸ್ ಪೀರ್ ಅವರ ಸಾಹಿತ್ಯವಿದೆ.