ಸಿನಿವಾಣಿ

ಮೆಗಾ ಸ್ಟಾರ್ ವಿತ್ ಮಾಸ್ ಮಹಾರಾಜ! 21 ವರ್ಷಗಳ ಬಳಿಕ ಮತ್ತೊಂದು 'ಅನ್ನಯ್ಯ'?

ಹೈದರಾಬಾದ್: ಟಾಲಿವುಡ್‌ನಲ್ಲಿ 'ಮಾಸ್ ಮಹಾರಾಜ' ಎಂದೇ ಖ್ಯಾತರಾಗಿರುವ ನಟ ರವಿತೇಜ ಶೀಘ್ರದಲ್ಲೇ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ, ಕೈತುಂಬಾ ಇರುವ ಸಿನಿಮಾ ಆಫರ್‌ಗಳಲ್ಲೇ ಬ್ಯೂಸಿಯಾಗಿರುವ ನಟ ಮೆಗಾ ಸ್ಟಾರ್ ಚಿರಂಜೀವಿ ಅವರ ಹೆಸರಿಡದ ಮುಂಬರುವ ಚಿತ್ರ '#ಚಿರು154' ನಲ್ಲಿ ಈ ಜೋಡಿ ಅಭಿಮಾನಿಗಳನ್ನು ರಂಜಿಸುವ ಅವಕಾಶವಿದೆ. ಹೌದು, ರವಿತೇಜ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಬಾಬಿ ಅವರು ನಿರ್ದೇಶಕರಾಗಿದ್ದಾರೆ. ಇನ್ನು, ಎಲ್ಲವೂ ಅಂದುಕೊಂಡಂತೆ ನಡೆದರೆ '#ಚಿರು154' ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರನಾಗಿ ನಟ ರವಿತೇಜ ತೆರೆ ಮೇಲೆ ಮಿಂಚಲಿದ್ದಾರೆ. ಅಂದಹಾಗೆ, ನಟ ರವಿತೇಜ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರು ಈ ಹಿಂದೆಯೇ ಒಮ್ಮೆ ತೆರೆ ಹಂಚಿಕೊಂಡಿದ್ದಾರೆ.
ತೆಲುಗಿನ 2000 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ 'ಅನ್ನಯ್ಯ' ದಲ್ಲಿ ಈ ತಾರಾ ಕಾಂಬಿನೇಷನ್ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳನ್ನು ಸಖತ್ ರಂಜಿಸಿದ್ದರು. 'ಅನ್ನಯ್ಯ' ಚಿತ್ರದಲ್ಲಿ ನಟಿ ಸೌಂದರ್ಯ, ವೆಂಕಟ್, ಕೋಟಾ ಶ್ರೀನಿವಾಸ ರಾವ್ ಮತ್ತು ಉತ್ಸಾಹ್ ಮತ್ತು ಹಲವು ಖ್ಯಾತ ಸಿನಿತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಕೂಡಾ ಚಿರು ಮತ್ತು ರವಿ ಅಣ್ಣತಮ್ಮಂದಿರ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇನ್ನು, '#ಚಿರು154' ಎಂದು ಹೆಸರಿಸಲಾಗಿರುವ ಈ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿಯಾಗಿ ನಟಿ ಶ್ರುತಿ ಹಾಸನ್ ಆಯ್ಕೆಯಾಗಿದ್ದಾರೆ. ಪಕ್ಕಾ ಆಕ್ಷನ್ ಎಂಟರ್‌ಟೈನರ್ ಆಗಿರಲಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿದ್ದಾರೆ. ಮತ್ತೊಂದೆಡೆ, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಈ ಸಿನಿಮಾಗೆ ಸಂಗೀತವನ್ನು ಸಂಯೋಜಿಸಲಿದ್ದಾರೆ.