ಮುಂಬೈ: "ಸಾಮ್ರಾಟ್ ಪೃಥ್ವಿರಾಜ್' ಬಾಕ್ಸ್ ಆಫೀಸ್ನಲ್ಲಿ ನೆಲ ಕಚ್ಚುತ್ತಿದ್ದಂತೆ ಆ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾನುಷಿ ಚಿಲ್ಲರ್ ಕಥೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಏಕೆಂದರೆ, ಮೊದಲ ಚಿತ್ರದಲ್ಲೇ ಮಾನುಷಿಗೆ ಎಲ್ಲವೂ ಸಿಕ್ಕಿತ್ತು. ದೊಡ್ಡ ನಿರ್ಮಾಣ ಸಂಸ್ಥೆ, ದೊಡ್ಡ ಹೀರೋ, ದೊಡ್ಡ ಚಿತ್ರ ... ಆದರೆ, ಮಿಸ್ ಆಗಿದ್ದು ಅದೃಷ್ಟ ಮಾತ್ರ. ಮೊದಲ ಚಿತ್ರವೇ ಸೋತಿದ್ದರಿಂದ ಅವರಿಗೆ ಮುಂದೆ ಅವಕಾಶಗಳು ಸಿಗುತ್ತವಾ? ಅಥವಾ ಮೊದಲ ಚಿತ್ರವೇ ಕೊನೆಯ ಚಿತ್ರವಾಗುತ್ತದಾ? ಎಂಬ ಮಾತುಗಳು ಕೇಳಿಬಂದವು. ಆದರೆ, ಮಾನುಷಿ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳನ್ನು ಒಪ್ಪುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಇದನ್ನೂ ಓದಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಜಯ್ ದೇವಗನ್,ಸೂರ್ಯ ಅತ್ಯುತ್ತಮ ನಟ, ಸಂಚಾರಿ ವಿಜಯ್ ಅಭಿನಯದ ಚಿತ್ರಕ್ಕೂ ಪ್ರಶಸ್ತಿ
ಮಾನುಷಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಈಗಾಗಲೇ ಸದ್ದಿಲ್ಲದೆ ಪ್ರಾರಂಭವಾಗಿದೆ. ಅದೇ "ಟೆಹ್ರಾನ್'. ನೈಜ ಟನೆಗಳನ್ನು ಆಧರಿಸಿದ ಈ ಚಿತ್ರವನ್ನು ಅರುಣ್ ಗೋಪಾಲನ್ ನಿರ್ದೇಶನ ಮಾಡುತ್ತಿದ್ದು, ಜಾನ್ ಅಬ್ರಹಾಂ ನಾಯಕನಾಗಿ ನಟಿಸುತ್ತಿದಾರೆ. ಇದೊಂದು ಪಕ್ಕಾ ಥ್ರಿಲ್ಲರ್ ಚಿತ್ರವಾಗಿದ್ದು, ಮ್ಯಾಡಕ್ ಸಂಸ್ಥೆ ನಿರ್ಮಿಸುತ್ತಿದೆ. ಭಾರತವಲ್ಲದೆ, ಯೂರೋಪ್ನಲ್ಲೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.
ಇದಲ್ಲದೆ, ಮಾನುಷಿ ಇನ್ನೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. "ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಹೆಸರಿನ ಈ ಚಿತ್ರದಲ್ಲಿ ಅವರಿಗೆ ನಾಯಕನಾಗಿ ನಟಿಸುತ್ತಿರುವುದು ವಿಕ್ಕಿ ಕೌಶಲ್. ಸದ್ಯ ಈ ಚಿತ್ರದ ಪ್ರೀ&ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ವರ್ಷದ ಕೊನೆಗೆ ಪ್ರಾರಂಭವಾಗುವ ಸಾಧ್ಯತೆ ಇದೆ.