ಸಿನಿವಾಣಿ

'ಮನ್ನತ್​' ಮತ್ತು 'ಜನ್ನತ್​'ನ ಮೌಲ್ಯ ಎಷ್ಟು? ಕೇಳಿದ್ರೆ ಸುಸ್ತಾಗ್ತೀರಿ ...

chetannadiger

ಮುಂಬೈನಲ್ಲಿರುವ ಶಾರೂಖ್​ ಖಾನ್​ ಅವರ ಮನೆ 'ಮನ್ನತ್​' (ವರ) ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಮನ್ನತ್​ ಮನೆಯ ಮೌಲ್ಯ ಎಷ್ಟು ಗೊತ್ತಾ? ಕೇಳಿದರೆ ನಿಜಕ್ಕೂ ಸುಸ್ತಾಗುತ್ತದೆ.

ಈ ಆರು ಮಹಡಿಯ 26,328 ಚದುರಡಿ ಮನೆಯ ಬೆಲೆ 200 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಇಷ್ಟಕ್ಕೂ ಅಂಥದ್ದೇನಿದೆ ಆ ಮನೆಯಲ್ಲಿ ಎಂಬ ಪ್ರಶ್ನೆ ಬರುವುದು ಸಹಜ. ಮೊದಲಿಗೆ ಮನ್ನತ್​ ಇರುವುದು ಮುಂಬೈನ ಬಾಂದ್ರಾದಲ್ಲಿ. ಇದೊಂದು ಅತ್ಯಂತ ಕಾಸ್ಟ್ಲಿ ಏರಿಯಾ ಆಗಿದ್ದು, ಈ ಏರಿಯಾದಲ್ಲಿ 26 ಸಾವಿರ ಚದುರಡಿ ಎಂದರೆ, ಅದರ ಮೊತ್ತವೇ ನೂರು ಕೋಟಿಯ ಮೇಲಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು, ಆ ಮನೆಯ ಮಾರ್ಬಲ್​, ಕಾರ್ಪೆಟ್​, ಲೈಟಿಂಗ್​ಗೆ ಶಾರೂಖ್​ ಮತ್ತು ಅವರ ಪತ್ನಿ ಗೌರಿ ಎಷ್ಟು ಖರ್ಚು ಮಾಡಿದ್ದಾರೆ ಎಂದು ಸಾಕಷ್ಟು ಚರ್ಚೆ ಆಗಿದೆ. ಇದೆಲ್ಲಾ ಸೇರಿ ಶಾರೂಖ್​ ಖಾನ್​ ಅವರ ಮುಂಬೈ ಮನೆಗೆ 200 ಕೋಟಿ ಮೌಲ್ಯ ಕಟ್ಟಲಾಗುತ್ತದೆ.

ಇದಲ್ಲದೆ, ದುಬೈನ ಪಾಮ್​ ಜುಮೇರಾದಲ್ಲಿ ಶಾರೂಖ್​ ಒಂದು ವಿಲ್ಲಾ ಖರೀದಿಸಿದ್ದು, ಅದಕ್ಕೆ ಜನ್ನತ್​ (ಸ್ವರ್ಗ) ಎಂಬ ಹೆಸರಿಡಲಾಗಿದೆ. ಈ ಮನೆಯ ಮೌಲ್ಯ 24 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಮನ್ನತ್​ ಮತ್ತು ಜನ್ನತ್​ ಅಲ್ಲದೇ, ಲಂಡನ್​​ನನ ಪಾರ್ಕ್​ ಲೇನ್​ನಲ್ಲಿ ಶಾರೂಖ್​ ಖಾನ್​ ಒಡೆತನದ ಮನೆ ಇದ್ದು, ಆ ಮನೆಯ ಬೆಲೆ 172 ಕೋಟಿ ಎಂದು ಹೇಳಲಾಗಿದೆ.

ಅಲ್ಲಿಗೆ, ಶಾರೂಖ್​ ಖಾನ್​ ಮನೆಗಳ ಬೆಲೆಯೇ 400 ಕೋಟಿಗೂ ಹೆಚ್ಚು ಮೌಲ್ಯವಾದಂತಾಗುತ್ತದೆ. ಮನೆಗಳ ಮೌಲ್ಯವೇ ಅಷ್ಟಾದರೆ, ಶಾರೂಖ್​ ಅವರ ಒಟ್ಟು ಆಸ್ತಿ ಎಷ್ಟು ಬೆಲೆ ಬಾಳಬಹುದು ಎಂಬ ಪ್ರಶ್ನೆ ಸಹಜವೇ. ಶಾರೂಖ್​ 5 ಸಾವಿರ ಕೋಟಿಗೆ ಬಾಳುತ್ತಾರೆ ಎಂದು ಹೇಳಲಾಗುತ್ತದೆ.