ಮರಾಠಿ ಚಿತ್ರದ ರೀಮೇಕ್​ನಲ್ಲಿ ಸಲ್ಮಾನ್​ ಖಾನ್​!

Salman Khan - Final
Published on

ಸಲ್ಮಾನ್​ ಖಾನ್​ ಅವರ ಚಿತ್ರಗಳೆಂದರೆ, ಅದು ಯಾವುದೋ ಫಾರಿನ್​ ಚಿತ್ರದ ರೀಮೇಕ್​ ಆಗಿರುತ್ತದೆ ಎಂಬ ನಂಬಿಕೆ ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ. ಅದಕ್ಕೆ ಸರಿಯಾಗಿ, ಅವರ 'ಭಾರತ್​' ಚಿತ್ರವು ದಕ್ಷಿಣ ಕೊರಿಯಾದ 'ಓಡ್​ ಟು ಮೈ ಫಾದರ್​'ನ ರೀಮೇಕ್​ ಆಗಿತ್ತು. 'ಟ್ಯೂಬ್​ಲೈಟ್​' ಚಿತ್ರವು 'ಲಿಟಲ್​ ಬಾಯ್​' ಎಂಬ ಚಿತ್ರದ ರೀಮೇಕ್​ ಆಗಿತ್ತು.

ಈಗ್ಯಾಕೆ ಈ ವಿಷಯವೆಂದರೆ, ಸಲ್ಮಾನ್​ ಅವರ ಮುಂದಿನ ಚಿತ್ರ ಸಹ ಒಂದು ರೀಮೇಕ್​ ಚಿತ್ರವೇ. ಆದರೆ, ಈ ಬಾರಿ ಯಾವುದೋ ಫಾರಿನ್​ ಚಿತ್ರವನ್ನು ಅವರು ಬೆನ್ನಟ್ಟಿ ಹೋಗುತ್ತಿಲ್ಲ. ಮರಾಠಿ ಭಾಷೆಯ ಚಿತ್ರವೊಂದನ್ನು ನೋಡಿ ಖುಷಿಪಟ್ಟಿರುವ ಅವರು, ಅದರ ಹಿಂದಿ ರೀಮೇಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಷ್ಟಕ್ಕೂ ಸಲ್ಮಾನ್​ ಅವರಿಗೆ ಇಷ್ಟವಾಗಿರುವ ಆ ಚಿತ್ರ ಯಾವುದು ಎಂಬ ಪ್ರಶ್ನೆ ಸಹಜ. ಅದೇ 'ಮುಲ್ಶಿ ಪ್ಯಾಟರ್ನ್​' . 2018ರಲ್ಲಿ ಬಿಡುಗಡೆಯಾದ ಈ ಚಿತ್ರವು ಸಾಕಷ್ಟು ಜನಪ್ರಿಯವಾಗಿತ್ತು. ಈ ಚಿತ್ರವನ್ನು ಇದೀಗ ಸಲ್ಮಾನ್​, 'ಗನ್ಸ್​ ಆಫ್​ ನಾರ್ಥ್​' ಎಂಬ ಹೆಸರಿಟ್ಟು ನಿರ್ಮಿಸುತ್ತಿದ್ದಾರೆ.

ಹಾಗೆ ನೋಡಿದರೆ, ಈ ಚಿತ್ರದಲ್ಲಿ ವಿಲನ್​ ಪಾತ್ರವೇ ಮುಖ್ಯ. ಹೀರೋ ಪಾತ್ರ ಅಷ್ಟೇನೂ ದೊಡ್ಡದಾಗಿರಲಿಲ್ಲ. ಆದರೆ, ಆ ಪಾತ್ರವನ್ನು ಸಾಕಷ್ಟು ಬೆಳೆಸಿ, ಸಲ್ಮಾನ್​ ಖಾನ್​ಗೆ ಹೊಂದುವಂತೆ ರೂಪಿಸಲಾಗುತ್ತಿದೆ. ಇದೊಂದು ಪೊಲೀಸ್​ ಇನ್​ಸ್ಪೆಕ್ಟರ್​ನ ಪಾತ್ರವಾಗಿದ್ದು, ಮೂಲ ಚಿತ್ರದಲ್ಲಿ ಉಪೇಂದ್ರ ಲಿಮಯೇ ನಟಿಸಿದ್ದರು. ಈಗ ಆ ಪಾತ್ರವನ್ನು ಸಲ್ಮಾನ್​ ಮಾಡುತ್ತಿದ್ದಾರೆ.

ಇನ್ನು ವಿಲನ್​ ಪಾತ್ರದಲ್ಲಿ, ಅವರ ತಂಗಿ ಅರ್ಪಿತಾ ಗಂಡ ಆಯುಷ್​ ನಟಿಸುತ್ತಿದ್ದಾರೆ. ಮಿಕ್ಕಂತೆ ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಆದರೆ, ಅದಕ್ಕೂ ಮುನ್ನ 'ರಾಧೆ - ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​' ಕೆಲಸ ಮುಗಿಸಬೇಕಿರುವ ಸಲ್ಮಾನ್​, ಆ ಚಿತ್ರ ಮುಗಿಸಿ ಮುಂದಿನ ವರ್ಷ 'ಗನ್ಸ್​ ಆಫ್​ ನಾರ್ಥ್​' ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net