ಸಿನಿವಾಣಿ

ರಾಮನಾಗುವುದಕ್ಕೆ ನೋ ಎಂದ ಮಹೇಶ್​ ಬಾಬು ... ಕಾರಣ ಏನು ಗೊತ್ತಾ?

ಮುಂಬೈ: 3ಡಿಯಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ'ದಲ್ಲಿ ಮಹೇಶ್​ ಬಾಬು ರಾಮನ ಪಾತ್ರ ಮಾಡುತ್ತಿರುವ ವಿಷಯ ಗೊತ್ತು ತಾನೇ? ಗೊತ್ತಿಲ್ಲದಿದ್ದರೆ ಕೇಳಿ. ನಿರ್ಮಾಪಕ ಮಧು ಮಂಟೇನಾ ಬಾಲಿವುಡ್​ನಲ್ಲೊಂದು 'ರಾಮಾಯಣ' ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ಮಹೇಶ್​ ಬಾಬು, ಸೀತೆಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಮತ್ತು ರಾವಣನ ಪಾತ್ರಕ್ಕೆ ಅವರು ಹೃತಿಕ್​ ರೋಶನ್​ ಅವರನ್ನು ಫಿಕ್ಸ್​ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಚಿತ್ರವು 2022ರಲ್ಲಿ ಪ್ರಾರಂಭವಾಗಬೇಕಿತ್ತು. ಇದೀಗ, ಆ ಚಿತ್ರದಿಂದ ಮಹೇಶ್​ ಬಾಬು ಹೊರಬಂದಿರುವ ಸುದ್ದಿ ಇದೆ.

ಹೌದು, 'ರಾಮಾಯಣ' ಚಿತ್ರದಿಂದ ಮಹೇಶ್​ ಬಾಬು ಹೊರಬಂದಿರುವ ವಿಷಯ ಇದೀಗ ಕೇಳಿಬಂದಿದೆ. ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದ ಮಹೇಶ್​, ಇದ್ದಕ್ಕಿದ್ದಂತೆ ಬ್ಯಾಕ್​ಔಟ್​ ಆಗಿದ್ದು ಏಕೆ ಎಂಬ ಪ್ರಶ್ನೆ ಬರಬಹುದು. ಅದಕ್ಕೂ ಕಾರಣವಿದೆ. ಆ ಕಾರಣ, ರಾಜಮೌಳಿ ಎಂದು ಹೇಳಲಾಗುತ್ತಿದೆ.

ರಾಜಮೌಳಿಗೂ, ಮಹೇಶ್​ ಬಾಬು ಚಿತ್ರದಿಂದ ಹೊರಬರುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಸಹಜ. ಎಲ್ಲರಿಗೂ ಗೊತ್ತಿರುವಂತೆ, 'ಆರ್​ಆರ್​ಆರ್​' ಚಿತ್ರದ ನಂತರ ಮಹೇಶ್​ ಬಾಬು ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ರಾಜಮೌಳಿ ಈಗಾಗಲೇ ಹೇಳಿಕೊಂಡಿದ್ದಾರೆ. 'ಆರ್​ಆರ್​ಆರ್​' ಚಿತ್ರವು ಅಕ್ಟೋಬರ್​ 13ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ, ಮುಂದಿನ ವರ್ಷದಿಂದ ಮಹೇಶ್​ ಬಾಬು ಜತೆಗಿನ ಹೊಸ ಚಿತ್ರ ಪ್ರಾರಂಭವಾಗಲಿದೆಯಂತೆ.

'ರಾಮಾಯಣ' ಮತ್ತು ರಾಜಮೌಳಿ ನಿರ್ದೇಶನದ ಚಿತ್ರವು ಒಂದೇ ಕಾಲಕ್ಕೆ ಚಿತ್ರೀಕರಣ ಶುರುವಾಗಬೇಕಿರುವುದರಿಂದ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಮಹೇಶ್​ ಬಾಬುಗೆ ಎದುರಾಯಿತಂತೆ. ರಾಜಮೌಳಿ ನಿರ್ದೇಶನದಲ್ಲಿ ಕೆಲಸ ಮಾಡುವುದೇ ಅದೃಷ್ಟ ಎಂಬ ನಂಬಿಕೆ ಚಿತ್ರರಂಗದ ವಲಯದಲ್ಲಿ ಇರುವುದರಿಂದ, ಮಹೇಶ್​ ಬಾಬು ಸಹಜವಾಗಿಯೇ 'ರಾಮಾಯಣ' ಚಿತ್ರವನ್ನು ರಾಜಮೌಳಿ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

'ರಾಮಾಯಣ' ಚಿತ್ರದಿಂದ ಮಹೇಶ್​ ಬಾಬು ಹೊರಬಂದಿರುವುದರಿಂದ, ಇದೀಗ ಚಿತ್ರತಂಡದವರು ರಾಮನ ಪಾತ್ರಕ್ಕೆ ಇನ್ನೊಬ್ಬ ಸೂಕ್ತ ಪಾತ್ರಧಾರಿಯ ಹುಡುಕಾಟದಲ್ಲಿದ್ದು, ರಾಮನಾಗಿ ಯಾರು ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.