ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಕೆಲವು ವರ್ಷಗಳ ಹಿಂದಎ 'ಹೀರೋಯಿನ್' ಎಂಬ ಚಿತ್ರ ಮಾಡಿದ್ದು ನೆನಪಿದೆಯಾ? ಸಾಕಷ್ಟು ಸದ್ದು ಮಾಡಿ ಬಂದ ಈ ಚಿತ್ರ, ಆ ನಂತರ ಸದ್ದಿಲ್ಲದೆ ಮಾಯವಾಗಿ ಹೋಯಿತು. ಚಿತ್ರ ನೋಡಿದವರೆಲ್ಲಾ ಬೋರಿಂಗ್ ಅಂತ ಹೇಳಿ ಹೊರಬಂದಿದ್ದರು.
ಹೀಗೆ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದ ಈ ಚಿತ್ರ, ಇದೀಗ ಕ್ರಮೇಣ ಜನರಿಂದ ಮೆಚ್ಚುಗೆ ಪಡೆಯುತ್ತಿದೆ. ಕಾರಣ ಏನು ಗೊತ್ತಾ? ಸುಶಾಂತ್ ಸಿಂಗ್ ಆತ್ಮಹತ್ಯೆ. ಸುಶಾಂತ್ ಸಾವಿನ ನಂತರ ಕಂಗನಾ ಸೇರಿ ಹಲವರು ಬಾಲಿವುಡ್ನ ನಿಜ ಬಣ್ಣವನ್ನು ಬಯಲು ಮಾಡುತ್ತಿದ್ದಾರೆ. ಇದೆಲ್ಲವೂ 'ಹೀರೋಯಿನ್' ಚಿತ್ರದಲ್ಲೇ ಮಧುರ್ ಆಗಲೇ ತೋರಿಸಿರುವುದರಿಂದ, ಈಗ ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಖುದ್ದು ಮಧುರ್ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಸುಶಾಂತ್ ಸಾವಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಹಲವರು 'ಹೀರೋಯಿನ್' ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಆ ಚಿತ್ರದಲ್ಲಿ ನಾನೇನು ತೋರಿಸಿದ್ದೀನೋ ಅದೆಲ್ಲವೂ ನಿಜ ಎನ್ನುತ್ತಿದ್ದಾರೆ. ಕಲಾವಿದರು ಏನೆಲ್ಲಾ ಅನುಭವಿಸುತ್ತಾರೆ, ಹೇಗೆ ನಿರಂತರವಾಗಿ ಹೋರಾಡುತ್ತಿರುತ್ತಾರೆ ಎಂಬುದನ್ನೆಲ್ಲಾ ಆ ಚಿತ್ರದಲ್ಲಿ ನಾನು ತೋರಿಸಿದ್ದೆ. ಅದು ನಿಜ' ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಬಾಲಿವುಡ್ನವರು ಮುನಿಸಿಕೊಂಡಿದ್ದರಂತೆ. 'ಚಿತ್ರ ಬಿಡುಗಡೆಯಾದ ಹೊಸದರಲ್ಲಿ ಹಲವರು ಸಿಟ್ಟಾಗಿದ್ದರು. ನೈಜ ಘಟನೆಗಳನ್ನು ಆಧರಿಸಿ ಚಿತ್ರ ಮಾಡಿದ್ದೆ. ಅದು ಹಲವರಿಗೆ ಸಿಟ್ಟು ತರಿಸಿತ್ತು. ಆದರೆ, ಆ ಬಗ್ಗೆ ನನಗೆ ಬೇಸರವಿಲ್ಲ. ಏಕೆಂದರೆ, ಚಿತ್ರದಲ್ಲಿ ನಾನೇನು ತೋರಿಸಿದ್ದೇನೋ, ಅದು 95 ಪರ್ಸೆಂಟ್ ನಿಜವಾಗಿತ್ತು' ಎಂದು ಹೇಳಿದ್ದಾರೆ.
'ನಾನೊಬ್ಬ ಪ್ರಾಮಾಣಿಕ ನಿರ್ದೇಶಕ. ಹಾಗಾಗಿ ನಾನು ಏನು ಚಿತ್ರಗಳನ್ನು ಇದುವರೆಗೂ ನಾನು ಮಾಡಿದ್ದೀನೋ, ಅದು ನನ್ನ ನಿಲುವುಗಳಿಗೆ ಬದ್ಧವಾಗಿದೆ. ನಾನು ಯಾವುದೋ ಕ್ಯಾಂಪ್ಗೆ ಸೀಮಿತವಲ್ಲ. ವಸ್ತುನಿಷ್ಠವಾಗಿ ನನಗನಿಸಿದ್ದನ್ನು ತೆರೆಯ ಮೇಲೆ ತರುತ್ತೇನೆ ಎಂದು' ಅವರು ಹೇಳಿದ್ದಾರೆ.