

ಆಲಿಯಾ ಭಟ್ ಅಭಿನಯದ 'ಸಡಕ್ 2' ಚಿತ್ರದ ಟ್ರೇಲರ್ಗೆ ಜನ ಯಾವ ರೀತಿ ಡಿಸ್ಲೈಕ್ ಒತ್ತುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಜನ ಆ ಚಿತ್ರದ ವಿರುದ್ಧ ಅದೆಷ್ಟು ರೊಚ್ಚಿಗೆದ್ದಿದ್ದಾರೆ ಎಂದರೆ, ಭಾರತದಲ್ಲೇ ಅತೀ ಹೆಚ್ಚು ಡಿಸ್ಲೈಕ್ ಪಡೆದ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುಂದಿನ ದಿನಗಳಲ್ಲಿ ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಹ ಇದೇ ದಾರಿಯಲ್ಲಿ ಮುಂದುವರೆಯುತ್ತದಾ? ಜನ ಈ ಚಿತ್ರದ ಟ್ರೇಲರ್ಗೂ ಇದೇ ರೀತಿ ಆಕ್ರೋಶ ವ್ಯಕ್ತಪಡಿಸುತ್ತಾರಾ? ಎಂಬ ಪ್ರಶ್ನೆಯೊಂದು ಇದೀಗ ಎಲ್ಲರನ್ನೂ ಕಾಡುತ್ತಿದೆ.
ಇದನ್ನೂ ಓದಿ: PHOTOS; ಹೊಸ ಫೋಟೋಶೂಟ್ನಲ್ಲಿ ಮಾನ್ವಿತಾ ಮಿಂಚಿಂಗ್…
'ಲಾಲ್ ಸಿಂಗ್ ಚಡ್ಡಾ' ಚಿತ್ರದ ಚಿತ್ರೀರಣ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಕರೊನಾ ಹಾವಳಿ ಹೆಚ್ಚಿರುವುದರಿಂದ, ಚಿತ್ರತಂಡವು ಟರ್ಕಿಯಲ್ಲಿ ಚಿತ್ರೀಕರಣ ಮಾಡುವುದಕ್ಕೆ ತೀರ್ಮಾನಿಸಿದೆ. ಅಕ್ಟೋಬರ್ನಿಂದ ಚಿತ್ರೀಕರಣ ಮಾಡುವ ಯೋಚನೆ ಇದ್ದು, ಅದಕ್ಕೂ ಮುನ್ನ ಆಮೀರ್ ಸೇರಿದಂತೆ ಚಿತ್ರತಂಡದ ಕೆಲವೇ ಮಂದಿ, ಟರ್ಕಿಗೆ ಶೂಟಿಂಗ್ ಲೊಕೇಶನ್ ಹುಡುಕುವುದಕ್ಕೆ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಟರ್ಕಿಯ ಮೊದಲ ಮಹಿಳೆ ಎಮೀನ್ ಎರ್ಡೋಗನ್ ಅವರನ್ನು ಇಸ್ತಾನ್ಬುಲ್ನಲ್ಲಿ ಆಮೀರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಹಲವರಿಗೆ ಅಸಮಾಧಾನವಿದೆ. ಕಾರಣ, ಭಾರತ ಮತ್ತು ಟರ್ಕಿಯ ನಡುವೆ ಸಂಬಂಧಗಳು ಅಷ್ಟು ಚೆನ್ನಾಗಿಲ್ಲ. ಕಳೆದ ವರ್ಷ ಕಾಶ್ಮೀರದಲ್ಲಿ ಆರ್ಟಿಕಲ್ 370 ಹೇರಿದ ನಂತರ, ಟರ್ಕಿಯು ಪಾಕಿಸ್ತಾನದ ಪರ ವಹಿಸಿತ್ತು. ಇದರಿಂದ ಭಾರತ ಮತ್ತು ಟರ್ಕಿಯ ಸಂಬಂಧ ಕ್ಷೀಣಿಸಿತ್ತು.
ಇದನ್ನೂ ಓದಿ: ಆರೋಪಗಳಿಗೆ ರಿಯಲ್ ಗುಂಜನ್ ಸಕ್ಸೇನಾ ಉತ್ತರ
ಈಗ ಆಮೀರ್ ಅದೇ ದೇಶಕ್ಕೆ ಚಿತ್ರೀಕರಣಕ್ಕೆ ಹೋಗುತ್ತಿರುವುದು ಮತ್ತು ಅಲ್ಲಿನ ಮೊದಲ ಮಹಿಳೆಯನ್ನು ಭೇಟಿ ಮಾಡಿರುವುದು ಹಲವರಿಗೆ ಕೋಪ ತರಿಸಿದೆ. ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ, ಈಗಾಗಲೇ 'ಡಿಸ್ಲೈಕ್ ಲಾಲ್ ಸಿಂಗ್ ಚಡ್ಡಾ' ಎಂಬ ಅಭಿಯಾನ ಶುರುವಾಗಿದೆ. ಸದ್ಯ ಚಿತ್ರವು ಚಿತ್ರೀಕರಣ ಹಂತದಲ್ಲಿರುವುದರಿಂದ ಟ್ರೇಲರ್ ಅಥವಾ ಟೀಸರ್ ಬಿಡುಗಡೆಯನ್ನು ಚಿತ್ರತಂಡ ಯೋಚಿಸಿಲ್ಲ. ಈ ಚಿತ್ರದ ಟ್ರೇಲರ್ ಬಿಡುಗಡೆ ಏನಿದ್ದರೂ ಮುಂದಿನ ವರ್ಷ ಇಷ್ಟು ಹೊತ್ತಿಗೆ ಆಗಬಹುದು.
ಆದರೂ ಈಗಲೇ ಚಿತ್ರಕ್ಕೆ ಹೆಚ್ಚುಹೆಚ್ಚು ಡಿಸ್ಲೈಕ್ಗಳು ಸಿಗುವಂತೆ ನೋಡಿಕೊಳ್ಳಿ ಎಂಬ ಅಭಿಯಾನ ಶುರುವಾಗಿದೆ. 'ಸಡಕ್ 2' ಚಿತ್ರಕ್ಕೆ ಒಂದು ಕೋಟಿ ಡಿಸ್ಲೈಕ್ ಸಿಕ್ಕರೆ, 'ಲಾಲ್ ಸಿಂಗ್'ಗೆ ಕನಿಷ್ಠ ಹತ್ತು ಕೋಟಿಯಾದರೂ ಡಿಸ್ಲೈಕ್ ಸಿಗಬೇಕು ಮತ್ತು ಎಲ್ಲಾ ದಾಖಲೆಗಳನ್ನು ಮುರಿಯಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.