ಸಿನಿವಾಣಿ

‘ಮೇಡ್ ಇನ್ ಬೆಂಗಳೂರು’ ಚಿತ್ರತಂಡದಿಂದ ಶುರುವಾಯ್ತು ಲವ್​ ಲೆಟರ್ ಅಭಿಯಾನ …

ಬೆಂಗಳೂರು: ಮೂರು ವರ್ಷಗಳ ಹಿಂದೆ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ 'ದುನಿಯಾ' ವಿಜಯ್​ ಅಭಿನಯದ ಮತ್ತು ನಿರ್ದೇಶನದ 'ಸಲಗ' ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಆಗಿತ್ತು. ಈಗ 'ಮೇಡ್​ ಇನ್​ ಬೆಂಗಳೂರು' ಎಂಬ ಚಿತ್ರದ ಹಾಡೊಂದು ಈ ಬಾರಿಯ ಪರಿಷೆಯಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಇದೇ ಪರಿಷೆಯಲ್ಲಿ ಚಿತ್ರದ ಪ್ರಚಾರವನ್ನೂ ಮಾಡಲಾಗಿದೆ. ಈ ಚಿತ್ರದ ಟ್ರೈಲರ್​ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರವು ಡಿ. 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕಳೆದ ತಿಂಗಳ ಅಂತ್ಯದಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಸೋನು ನಿಗಮ್ ಹಾಡಿರುವ ‘ಒಲವು’ ಎಂಬ ಹಾಡನ್ನು ಸಾವಿರಾರು ಜನರ ನಡುವೆ ಬಿಡುಗಡೆ ಮಾಡಲಾಗಿದೆ. ಕಾರ್ತಿಕ ಸೋಮವಾರದಂದು ಬಿಡುಗಡೆಯಾದ ಈ ಹಾಡು ಇದೀಗ ಕೆಲವೇ ದಿನಗಳ ಅಂತರದಲ್ಲಿ ಎರಡು ಮಿಲಿಯನ್ ವೀಕ್ಷಣೆ ಕಂಡಿದೆ.

ಬರೀ ಹಾಡಷ್ಟೇ ಅಲ್ಲ, ಚಿತ್ರತಂಡದವರು ಇದೇ ಸಂದರ್ಭದಲ್ಲಿ ‘ಲವ್ಲೆಟರ್ ಟು ಬೆಂಗಳೂರು’ ಎಂಬ ಹೊಸ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಬೆಂಗಳೂರಿನ ಕುರಿತು ಯಾರು ಬೇಕಾದರೂ ಪ್ರೇಮಪತ್ರಗಳನ್ನು ಬರೆಯಬಹುದಾಗಿದೆ. ಮೂರು ದಿನಗಳ ಪರಿಷೆಯಲ್ಲಿ 800ಕ್ಕೂ ಹೆಚ್ಚು ಜನ ಬೆಂಗಳೂರಿನ ಕುರಿತ ತಮ್ಮ ಪ್ರೀತಿಯನ್ನು ಪತ್ರಗಳ ಮೂಲಕ ಹಿಡಿದಿಟ್ಟಿದ್ದಾರೆ. ಇದೆಲ್ಲದರ ಜತೆಗೆ, ಪರಿಷೆಯಲ್ಲಿ ಚಿತ್ರದ ಲೋಗೋ ಇರುವ 300 ಶರ್ಟ್ಗಳು ಮತ್ತು 200 ಮಗ್ಗಳನ್ನು ಮಾರಾಟ ಮಾಡಲಾಗಿದೆ.

ಈ ಕುರಿತು ಮಾತನಾಡುವ ಚಿತ್ರದ ನಿರ್ದೇಶಕ ಪ್ರದೀಪ್ ಶಾಸ್ತ್ರಿ, ‘ಪರಿಷೆಯಲ್ಲಿ ನಾನು ಮತ್ತು ನಮ್ಮ ಚಿತ್ರತಂಡದವರು ಟ್ಯಾಬ್ಲೋ ಇಟ್ಟುಕೊಂಡು ನಮ್ಮ ಸಿನಿಮಾದ ಲೋಗೋ ಇರುವ ಶರ್ಟ್ ಮತ್ತು ಮಗ್ಗಳನ್ನು ಮಾರಾಟ ಮಾಡಿದ್ದೇವೆ. ಸಾಕಷ್ಟು ಜನರ ಎದುರು ಚಿತ್ರವನ್ನು ಪ್ರಚಾರ ಮಾಡಿದ್ದೇವೆ. ಕಡಲೆಕಾಯಿ ಪರಿಷೆಯಲ್ಲಿ ಇದುವರೆಗೂ ಯಾರೂ ಹಾಡು ಬಿಡುಗಡೆ ಮಾಡಿ, ಚಿತ್ರದ ಪ್ರಚಾರ ಮಾಡಿದ ಉದಾಹರಣೆ ಇರಲಿಲ್ಲ. ನಾವು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದೇವೆ’ ಎನ್ನುತ್ತಾರೆ.

ರಜನಿ ಥರ್ಸ್ಡೇ ಸ್ಟೋರೀಸ್ ಲಾಂಛನದಲ್ಲಿ ಬಾಲಕೃಷ್ಣ ಬಿ.ಎಸ್ ನಿರ್ಮಿಸಿರುವ ‘ಮೇಡ್ ಇನ್ ಬೆಂಗಳೂರು’ ಚಿತ್ರದಲ್ಲಿ ಅನಂತ್ ನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ, ಮಧುಸೂದನ್ ಗೋವಿಂದ್, ಪುನೀತ್ ಮಂಜುನಾಥ್, ವಂಶಿಧರ್, ಹಿಮಾನ್ಶಿ ವರ್ಮ, ಸುಧಾ ಬೆಳವಾಡಿ, ಅರ್ಚನಾ ಕೊಟ್ಟಿಗೆ ಮುಂತಾದವರು ಅಭಿನಯಿಸಿದ್ದು, ಚಿತ್ರಕ್ಕೆ ಅಶ್ವಿನ್ ಪಿ. ಕುಮಾರ್ ಅವರ ಸಂಗೀತ ಸಂಯೋಜಿಸಿದ್ದಾರೆ.