Actor Vishal : ಕಾಲಿವುಡ್ ಸೂಪರ್ಸ್ಟಾರ್ ವಿಶಾಲ್ ಅವರು ತಮಿಳುನಾಡು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಸಿನಿ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಅವರ ಅನೇಕ ಚಿತ್ರಗಳು ಬಾಲಿವುಡ್ಗೆ ಡಬ್ ಆಗಿವೆ. ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ವಿಶಾಲ್ ಗುರುತಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಇನ್ನೂ ಮದುವೆಯಾಗದ ಕೆಲವು ನಟರಲ್ಲಿ ವಿಶಾಲ್ ಕೂಡ ಒಬ್ಬರು. ವಯಸ್ಸು 47 ಆದರೂ ಇನ್ನು ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಆದರೆ, ಏಕಾಂಗಿ ಜೀವನಕ್ಕೆ ಇದೀಗ ವಿದಾಯ ಹೇಳುವ ಸಮಯ ಬಂದಿದೆ. ಕೊನೆಗೂ ವಿಶಾಲ್ ಅವರು ಮದುವೆಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಅವರು ಕೈ ಹಿಡಿಯಲಿರುವ ವಧು ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ನಟ ವಿಶಾಲ್ 2004ರಲ್ಲಿ ಬಿಡುಗಡೆಯಾದ "ಸೆಲ್ಲಮೆ" ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರ ವಿಶಾಲ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಚಿತ್ರವಾಯಿತು. ಇದರ ನಂತರ ಲಿಂಗುಸ್ವಾಮಿ ನಿರ್ದೇಶನದ ಸಂಡಕೋಳಿ ಚಿತ್ರ ಬಿಡುಗಡೆಯಾಯಿತು, ಇದು ಅವರ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಯಿತು. ಈ ಎರಡು ಚಿತ್ರಗಳ ಯಶಸ್ಸಿನ ನಂತರ ವಿಶಾಲ್ ಅವರು ತಿಮಿರು, ತಾಮಿರಬರಣಿ, ತೀರದ ವಿಲೈಯತ್ತು ಪಿಳ್ಳೈ, ಅವನ್ ಇವನ್, ಪಾಂಡಿಯ ನಾಡು, ಪೂಜಾ, ಮರುದು ಮತ್ತು ತುಪ್ಪರಿವಾಲನ್ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ನಟನಿಂದ ನಿರ್ಮಾಪಕನಾಗಿ ಬದಲಾಗಿದ್ದ ವಿಶಾಲ್, ಇದೀಗ ತುಪ್ಪರಿವಾಲನ್ 2 ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇನ್ನು ಕಳೆದ ಕೆಲವು ತಿಂಗಳುಗಳಿಂದ ವಿಶಾಲ್, ಅನಾರೋಗ್ಯದ ಕಾರಣ ರಜೆಯಲ್ಲಿದ್ದಾರೆ. ಇತ್ತೀಚೆಗೆ ವಿಶಾಲ್ ಅವರು ವಿಶೇಷ ಅತಿಥಿಯಾಗಿ ಟ್ರಾನ್ಸ್ಜೆಂಡರ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ಕುರಿತು ಹಲವಾರು ಸುದ್ದಿಗಳು ಪ್ರಕಟವಾದವು. ವಿಶಾಲ್ಗೆ ಏನೋ ಆರೋಗ್ಯ ಸಮಸ್ಯೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಆ ರೀತಿ ಏನು ಇಲ್ಲ ಎಂದು ವಿಶಾಲ್ ಅವರ ಆಪ್ತ ವಲಯ ಸ್ಪಷ್ಟನೆ ನೀಡಿದೆ. ಸದ್ಯ ತಮ್ಮ ಮುಂದಿನ ಚಿತ್ರ ತುಪ್ಪರಿವಾಲನ್ 2ರಲ್ಲಿ ಬಿಜಿಯಾಗಿರುವ ವಿಶಾಲ್, ಸ್ವಲ್ಪ ಬಿಡುವು ಮಾಡಿಕೊಂಡು ನಿನ್ನೆಯಷ್ಟೇ ಚೆನ್ನೈನಲ್ಲಿ ನಡೆದ ಯೋಗಿ ಡಾ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಮದುವೆ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ವಿಶಾಲ್ ಅವರು 35 ವರ್ಷದ ನಟಿ ಧನ್ಶಿಕಾ ಅವರನ್ನು ಮದುವೆಯಾಗಲಿದ್ದಾರೆ. ಇದೇ ಆಗಸ್ಟ್ ತಿಂಗಳಲ್ಲಿ ಇಬ್ಬರ ವಿವಾಹ ಕಾರ್ಯ ನೆರವೇರಲಿದೆ. ಇಬ್ಬರು ಡೇಟಿಂಗ್ ಮಾಡುತ್ತಿರುವ ಸಂಗತಿಯನ್ನು ಯೋಗಿ ಡಾ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಬಹಿರಂಗಪಡಿಸಿದರು. ಅಂದರೆ, ಯೋಗಿ ಡಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಅದರಲ್ಲಿ ಧನ್ಶಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧನ್ಶಿಕಾ, ನಮ್ಮ ಸುದ್ದಿ ವರದಿ ವೈರಲ್ ಆದ ನಂತರ ನಮ್ಮ ಸಂಬಂಧವನ್ನು ಅಧಿಕೃತಗೊಳಿಸುವಂತೆ ಒತ್ತಾಯಿಸಲಾಯಿತು ಎಂದರು. ನಾವಿಬ್ಬರು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲು ಬಯಸಿರಲಿಲ್ಲ. ಆದಾಗ್ಯೂ, ಇಂದು ಬೆಳಗ್ಗೆ ಸುದ್ದಿ ವರದಿ ವೈರಲ್ ಆಯಿತು. ಹೀಗಾಗಿ ಮರೆಮಾಡಲು ಏನೂ ಉಳಿದಿಲ್ಲ ಎಂದು ನಮಗೆ ಅನಿಸಿತು ಎಂದು ಧನ್ಶಿಕಾ ಹೇಳಿದರು.
ಮಾತು ಮುಂದುವರಿಸಿದ ಧನ್ಶಿಕಾ, ವಿಶಾಲ್ ಮತ್ತು ನಾನು ಆಗಸ್ಟ್ 29 ರಂದು ಮದುವೆಯಾಗಲು ಯೋಜಿಸುತ್ತಿದ್ದೇವೆ. ವಿಶಾಲ್ ಕಳೆದ 15 ವರ್ಷಗಳಿಂದ ನನಗೆ ಪರಿಚಿತರು. ಹಿಂದೆ ನಾವು ಭೇಟಿಯಾದಾಗಲೆಲ್ಲಾ ಅವರು ನನ್ನನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ನಾನು ತೀವ್ರ ತೊಂದರೆಯಲ್ಲಿದ್ದಾಗ, ಅವರು ನನ್ನ ಮನೆಗೆ ಭೇಟಿ ನೀಡಿ ನನಗಾಗಿ ಧ್ವನಿ ಎತ್ತಿದ್ದರು. ಯಾವುದೇ ನಾಯಕ ಇದುವರೆಗೆ ನನ್ನ ಮನೆಗೆ ಭೇಟಿ ನೀಡಿಲ್ಲ. ಇದು ವಿಶಾಲ್ ಅವರ ಒಳ್ಳೆಯ ಗುಣ. ಅವರ ಹಾವಭಾವ ನನಗೆ ಇಷ್ಟವಾಯಿತು ಎಂದು ಭಾವಿ ಪತಿಯನ್ನು ಧನ್ಶಿಕಾ ಕೊಂಡಾಡಿದರು.
ತಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾ, ಇತ್ತೀಚೆಗೆ ನಾವು ಪರಸ್ಪರ ಮಾತನಾಡಲು ಪ್ರಾರಂಭಿಸಿದೆವು. ಆ ಮಾತು ನಮ್ಮನ್ನು ಎಲ್ಲೋ ಕರೆದೊಯ್ಯುತ್ತಿದೆ ಎಂದು ನಮಗೆ ಅನಿಸಿತು. ನಾವಿಬ್ಬರು ಮದುವೆಯಾಗಲು ಬಯಸುತ್ತೇವೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವನು ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ವಿಶಾಲ್ ಎಂದು ವೇದಿಕೆಯಲ್ಲೇ ಧನ್ಶಿಕಾ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಶಾಲ್, ತಮ್ಮ ಮದುವೆಯ ಸುದ್ದಿಯನ್ನು ಮಾಧ್ಯಮಗಳಿಗೆ ಸಂತೋಷದಿಂದ ತಿಳಿಸಿದರು. ನನ್ನ ಮದುವೆ ನಿಶ್ಚಯವಾಗಿದೆ. ನನಗೆ ಒಬ್ಬ ಹುಡುಗಿ ಇದ್ದಾಳೆ. ಧನ್ಶಿಕಾಳ ತಂದೆ ಕೂಡ ಇಲ್ಲಿದ್ದಾರೆ ಮತ್ತು ಅವರ ಆಶೀರ್ವಾದದೊಂದಿಗೆ ನಾನು ಅವಳನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ನಾನು ಆಕೆಯನ್ನು ಇಷ್ಟಪಡುತ್ತೇನೆ ಮತ್ತು ನಾನು ಧನ್ಶಿಕಾಳನ್ನು ಮದುವೆಯಾಗಲಿದ್ದೇನೆ. ಅವಳು ಅದ್ಭುತ ವ್ಯಕ್ತಿ ಎಂದು ಹೇಳಿದರು.
'ಕಾಲಂ ಮಾರಿ ಪೋಚು' ಚಿತ್ರದ ವಡಿವೇಲು ಮತ್ತು ಕೋವೈ ಸರಳಾ ದಂಪತಿಯಂತೆ ನಾವು ಕೊನೆಯಾಗುವುದಿಲ್ಲ ಎಂದು ನಟ ವಿಶಾಲ್ ಇದೇ ಸಂದರ್ಭದಲ್ಲಿ ತಮಾಷೆಯಾಗಿ ಹೇಳಿದರು. ಯೋಗಿ ಡಾ ಚಿತ್ರದಲ್ಲಿ ಧನ್ಶಿಕಾಳ ಸಾಹಸ ಪ್ರದರ್ಶನವನ್ನು ನೋಡಿದ ನಂತರ, ನಾನು ತುಂಬಾ ಜಾಗೃತನಾಗಿರಬೇಕು ಎಂದು ಅರ್ಥವಾಯಿತು. ನಾನು ಸಿದ್ಧನಾಗಿರಬೇಕು ಎಂದು ತೋರುತ್ತದೆ. ನಾನು ಪಾಂಡಿಯನ್ ಮಾಸ್ಟರ್ (ಸ್ಟಂಟ್ ಕೊರಿಯೋಗ್ರಾಫರ್) ಅವರಿಂದ ಅವಳನ್ನು ತಡೆಯಬೇಕೆಂದು ಕಲಿಯಬೇಕಿದೆ. ಅವಳು ಒದ್ದರೆ, ಅದು ನನ್ನ ತಲೆಗೆ ಹತ್ತಿರವಾಗುತ್ತದೆ. ಆದರೆ, ನಾವು ಆ ರೀತಿ ಜಗಳವಾಡಬಾರದು ಎಂದು ನಾನು ಭಾವಿಸುತ್ತೇನೆ. ನಮ್ಮಿಬ್ಬರಿಗೂ ಉತ್ತಮ ತಿಳುವಳಿಕೆ ಇದೆ ಎನ್ನುವ ಮೂಲಕ ವಿಶಾಲ್ ನಗೆ ಚಟಾಕಿ ಹಾರಿಸಿದರು.
ತನ್ನನ್ನು ತಾನು ಧನ್ಯ ವ್ಯಕ್ತಿ ಎಂದು ಕರೆದುಕೊಂಡ ವಿಶಾಲ್, ದೇವರು ಯಾವಾಗಲೂ ಕೊನೆಯವರಿಗೆ ಅತ್ಯುತ್ತಮವಾದದ್ದನ್ನು ಉಳಿಸುತ್ತಾನೆ. ಅವನು ನನಗಾಗಿ ಧನ್ಶಿಕಾಳನ್ನು ಉಳಿಸಿದ್ದಾನೆ. ನಾವು ಸುಂದರವಾದ ಜೀವನವನ್ನು ನಡೆಸಲಿದ್ದೇವೆ. ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ನಮಗೆ ಈಗ ಉತ್ತಮ ತಿಳುವಳಿಕೆ ಇದೆ ಮತ್ತು ಅದು ಯಾವಾಗಲೂ ಇರಬೇಕೆಂದು ಆಶಿಸುತ್ತೇನೆ. ನಾನು ಅವಳನ್ನು ನಂಬುತ್ತೇನೆ ಎಂದರು.
ಮದುವೆಯ ನಂತರವೂ ಧನ್ಶಿಕಾ ನಟನೆಯನ್ನು ಮುಂದುವರಿಸಲಿದ್ದಾರೆ ಎಂದು ವಿಶಾಲ್ ಭರವಸೆ ನೀಡಿದರು. ಅವರು ನಟಿಸುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಅವರು ಅದ್ಭುತ ಪ್ರತಿಭೆ. ಅವರ ಪ್ರತಿಭೆಯನ್ನು ಸೀಮಿತಗೊಳಿಸಲು ನಾನು ಬಯಸುವುದಿಲ್ಲ ಎಂದು ವಿಶಾಲ್ ಹೇಳಿದರು.
ಇದೇ ಸಂದರ್ಭದಲ್ಲಿ ಇಬ್ಬರು ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದರು. ನಂತರ ಧನ್ಶಿಕಾ ಮತ್ತು ವಿಶಾಲ್ ಆಗಸ್ಟ್ 29 ರಂದು ವಿವಾಹವಾಗುವುದಾಗಿ ಘೋಷಿಸಿದರು. (ಏಜೆನ್ಸೀಸ್)