ಇತ್ತೀಚೆಗಷ್ಟೇ 'ಹಂಡ್ರೆಡ್' ಎಂಬ್ ವೆಬ್ ಸೀರೀಸ್ನಲ್ಲಿ ಕಾಣಿಸಿಕೊಂಡಿದ್ದ ಲಾರಾ ದತ್ತಾ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಏನು ಗೊತ್ತಾ? ಹೊಸ ಚಿತ್ರವೊಂದರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಲಾರಾ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಜನಪ್ರಿಯಳಾಗೋದಕ್ಕೆ ಏನೆಲ್ಲಾ ಮಾಡಿದರು ಕಂಗನಾ?
ಇಷ್ಟಕ್ಕೂ ಲಾರಾ, ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಯಾವ ಚಿತ್ರಕ್ಕಾಗಿ ಗೊತ್ತಾ? ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಮ್' ಚಿತ್ರಕ್ಕೆ. ಇಷ್ಟರಲ್ಲಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿರಬೇಕಿತ್ತು. ಲಾಕ್ಡೌನ್ನಿಂದ ತಡವಾಗಿತ್ತು. ಆಗಸ್ಟ್ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅಕ್ಷಯ್ ಮತ್ತು ತಂಡ ಮುಂದಿನ ತಿಂಗಳು ಆಗಸ್ಟ್ಗೆ ಹಾರಲಿದ್ದಾರೆ.
'ಬೆಲ್ ಬಾಟಮ್' ಚಿತ್ರವು 80ರ ದಶಕದಲ್ಲಿ ನಡೆದ ಒಂದು ಘಟನೆಯ ಕುರಿತಾದ ಚಿತ್ರ. ಆ ಕಾಲಘಟ್ಟದಲ್ಲಿ ಇಡೀ ದೇಶವನ್ನು ಬೆಚ್ಚಿಬೀಳಿಸಿದ ಒಂದು ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದೆ. ಆ ಘಟನೆ ಏನು ಎಂದು ಕೇಳಬೇಡಿ. ಅದೇನೆಂದು ಗೊತ್ತಾದರೆ, ಚಿತ್ರದಲ್ಲಿ ನೋಡುವುದಕ್ಕೆ ಏನೂ ಇರುವುದಿಲ್ಲ ಎಂದು ಚಿತ್ರತಂಡ ಯಾವೊಂದು ವಿಷಯದ ಬಗ್ಗೆಯೂ ತುಟಿ ಬಿಚ್ಚುತ್ತಿಲ್ಲ.
ಈ ಚಿತ್ರದಲ್ಲಿ ಲಾರಾ ದತ್ತಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರ ಮಾಡುತ್ತಿದ್ದಾರಂತೆ. ಈ ಪಾತ್ರವನ್ನು ಯಾರಿಂದ ಮಾಡಿಸಬೇಕು ಎಂದು ಚಿತ್ರತಂಡದವರು ತಲೆ ಕೆಡಿಸಿಕೊಂಡು ಕುಳಿತಿದ್ದಾಗ ಹೊಳೆದ ಹೆಸರು ಲಾರಾ ಅವರದ್ದು. ಈ ಹಿಂದೆ, ಅಕ್ಷಯ್ ಮತ್ತು ಲಾರಾ, ನಾಯಕ-ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ 'ಸಿಂಗ್ ಈಸ್ ಬ್ಲಿಂಗ್' ಎಂಬ ಚಿತ್ರದಲ್ಲೂ ಜತೆಯಾಗಿ ನಟಿಸಿದ್ದರು.
ಈಗ ಅಕ್ಷಯ್ ಮತ್ತು ಲಾರಾ ಮತ್ತೊಮ್ಮೆ, 'ಬೆಲ್ ಬಾಟಮ್'ನಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಆದರೆ, ಈ ಬಾರಿ ಅವರು ನಾಯಕ-ನಾಯಕಿಯಾಗಿರುವುದಿಲ್ಲ . ಲಾರಾ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಕ್ಷಯ್ ಅವರು ಒಬ್ಬ ಸ್ಪೆಷಲ್ ಏಜೆಂಟ್ ಆಗಿ ನಟಿಸುತ್ತಿದ್ದಾರೆ.