ಬೆಂಗಳೂರು: ಲಹರಿ ಮ್ಯೂಸಿಕ್ ಚಾನಲ್, ಸದ್ದಿಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡದ ಹೊಸ ದಾಖಲೆಯೊಂದನ್ನು ಮಾಡಿದೆ. ಲಹರಿ ಯುಟ್ಯೂಬ್ ಚಾನೆಲ್ ಶುರುವಾಗಿ ೧೦ ವರ್ಷಗಳಾಗಿದ್ದು, ಈ ಅವಧಿಯಲ್ಲಿ ೧.೧೮ ಕೋಟಿ ಚಂದದಾರರ ಬಳಗ ಹೊಂದಿದೆ. ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿದೆ.
ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿರುವ ಯುಟ್ಯೂಬ್ ಸಂಸ್ಥೆಯಿಂದ ಲಹರಿ ಮ್ಯೂಸಿಕ್‌ಗೆ ಪ್ರತಿಷ್ಟಿತ 'ಡೈಮಂಡ್ ಅವಾರ್ಡ್' ಪ್ರಶಸ್ತಿ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.
ಲಹರಿ ಮ್ಯೂಸಿಕ್‌ಗೆ ಯೂಟ್ಯೂಬ್ ಸಂಸ್ಥೆಯಿಂದ ಪ್ರಶಸ್ತಿ ಸಿಗುತ್ತಿರುವುದು ಮೊದಲೇನಲ್ಲ. ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಸಿಲ್ವರ್ ಹಾಗೂ ಗೋಲ್ಡನ್ ಪ್ರಶಸ್ತಿ ಸಿಕ್ಕಿದ್ದವು. ಈಗ 'ಡೈಮಂಡ್ ಅವಾರ್ಡ್' ಸಿಕ್ಕಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್ ಅಗ್ರಗಣ್ಯ ಸ್ಥಾನಕ್ಕೇರಿದೆ.
ಈ ಕುರಿತು ಮಾತನಾಡುವ ಲಹರಿ ಸಂಸ್ಥೆಯ ವೇಲು, 'ನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್ ಚಾನಲ್ ಯೂಟ್ಯೂಬ್ನಲ್ಲಿ ಇಲ್ಲ. ಅಂತಹ ಹೊಸ ದಾಖಲೆ ಲಹರಿಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಎಲ್ಲರ ಬೆಂಬಲದಿಂದ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.