ಸಿನಿವಾಣಿ

ಬಿಗ್​ಬಾಸ್​ ಶೋ ಬದಲು ಮೆಂಟಲ್​ ಹಾಸ್ಪಿಟಲ್​ಗೆ ಹೋಗೋದೆ ಉತ್ತಮ ಎಂದ ಕುನಾಲ್ ಕಮ್ರಾ! Kunal Kamra

Kunal Kamra : ಅತ್ಯಂತ ವಿವಾದಾತ್ಮಕ ಶೋ ಯಾವುದು ಅಂತ ಕೇಳಿದರೆ ಮೊದಲು ನೆನಪಿಗೆ ಬರುವುದು ಬಿಗ್​ಬಾಸ್ ರಿಯಾಲಿಟಿ ಶೋ​. ಇಲ್ಲಿ ಮನರಂಜನೆಗಿಂತ ಕಿತ್ತಾಟ ಮತ್ತು ವಾಗ್ವಾದವೇ ಜಾಸ್ತಿ. ಹೀಗಾಗಿಯೇ ಈ ಶೋಗೆ ವಿವಾದ ಹುಟ್ಟು ಹಾಕುವವರನ್ನೇ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ತಮ್ಮ ಮಾತಿನ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡ ಸ್ಟ್ಯಾಂಡಪ್​ ಕಾಮೆಡಿಯನ್ ಕುನಾಲ್​ ಕಮ್ರಾರನ್ನು ಹಿಂದಿ ಬಿಗ್​ಬಾಸ್​ ಸೀಸನ್​​ಗೆ ಬರುವಂತೆ ಆಫರ್​ ನೀಡಲಾಗಿತ್ತು. ಆದರೆ, ಆ ಆಫರ್​ ತಿರಸ್ಕರಿಸಿ ಕುನಾಲ್ ಕಮ್ರಾ ಹೇಳಿದ ಮಾತು ಇದೀಗ ಭಾರೀ ವೈರಲ್​ ಆಗಿದೆ.

ಕುನಾಲ್ ಕಮ್ರಾ​ ವಿವಾದವೇನು? ​

ಮೊದಲಿಗೆ ಕುನಾಲ್​ ಕಮ್ರಾ ಹುಟ್ಟುಹಾಕಿದ ವಿವಾದ ಏನು ಎಂಬುದನ್ನು ತಿಳಿದುಕೊಳ್ಳೋಣ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕುನಾಲ್​, ಏಕನಾಥ್​ ಶಿಂಧೆ ಅವರು ಬಿಜೆಪಿ ಜತೆ ಹೊಂದಣಿಕೆ ಮಾಡಿಕೊಂಡು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ ಎಂದು ಹಾಸ್ಯ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ, ಹೊಸ ವಿವಾದ ಹುಟ್ಟಿಕೊಂಡಿತು. ಕುನಾಲ್​ ವಿರುದ್ಧ ಎಫ್​ಐಆರ್​ ಸಹ ದಾಖಲಿಸಲಾಗಿತ್ತು. ಅಲ್ಲದೇ, ಅನೇಕ ರಾಜಕೀಯ ನಾಯಕರು ಕುನಾಲ್​ ಮಾತಿಗೆ ಆಕ್ರೋಶ ಹೊರಹಾಕಿದ್ದರು.

ಬಿಗ್​ಬಾಸ್​ಗೆ ಆಫರ್​

ಬಿಗ್​ಬಾಸ್​ ಶೋ ಕಾಸ್ಟಿಂಗ್ ಏಜೆಂಟ್​ ಜತೆ ನಡೆದ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕುನಾಲ್​, ತನಗೆ ಬಿಗ್​ಬಾಸ್​ ಆಫರ್​ ಬಂದಿತ್ತು ಎಂದಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಸೀಸಸ್​ನ ಕಾಸ್ಟಿಂಗ್ ಅನ್ನು ನಾನು ನಿರ್ವಹಿಸುತ್ತಿದ್ದೇನೆ. ನಿಮ್ಮ ಆಯ್ಕೆ ಆಸಕ್ತಿದಾಯಕ ಎನಿಸಬಹುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿಮ್ಮ ನಿಜವಾದ ಉತ್ಸಾಹವನ್ನು ತೋರಿಸಲು ಮತ್ತು ಬೃಹತ್ ಪ್ರೇಕ್ಷಕರನ್ನು ತಲುಪಲು ಇದೊಂದು ಹುಚ್ಚು ವೇದಿಕೆಯಾಗಿದೆ. ನೀವು ಇದರಲ್ಲಿ ಭಾಗವಹಿಸುವಿರಾ? ನಿಮ್ಮ ಅಭಿಪ್ರಾಯವೇನು? ನಾವು ಅದರ ಬಗ್ಗೆ ಮಾತನಾಡಬಹುದೇ? ಎಂದು ಕಾಸ್ಟಿಂಗ್​ ಏಜೆಂಟ್ ಮಾಡಿದ್ದಾರೆ ಎನ್ನಲಾದ ವಾಟ್ಸ್​ಆ್ಯಪ್​ ಚಾಟ್​ನ ಸ್ಕ್ರೀನ್​ಶಾಟ್​ ಅನ್ನು ಕುನಾಲ್​ ಹಂಚಿಕೊಂಡಿದ್ದಾರೆ.

ಮೆಂಟಲ್​ ಹಾಸ್ಪಿಟಲ್​ಗೆ ಹೋಗ್ತೀನಿ

ಕಾಸ್ಟಿಂಗ್​ ಏಜೆಂಟ್​ಗೆ ಪ್ರತಿಕ್ರಿಯೆ ನೀಡಿರುವ ಕುನಾಲ್, ಬಿಗ್​ಬಾಸ್​ ಶೋಗಿಂತ ನಾನು ಮಾನಸಿಕ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚು ಉತ್ತಮ ಎಂದಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್ ಚಿತ್ರ 'ರಾಧೆ'ಯ ಹಾಡಿನೊಂದಿಗೆ ಇನ್​ಸ್ಟಾ ಸ್ಟೋರಿಯನ್ನು ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಬಿಗ್​ಬಾಸ್ OTTಯ ಮುಂದಿನ ಸೀಸನ್‌ಗಾಗಿ ಕುನಾಲ್ ಅವರನ್ನು ಸಂಪರ್ಕಿಸಲಾಗಿದೆಯೇ ಅಥವಾ ಬಿಗ್​ಬಾಸ್ 19ರ ಸೀಸನ್‌ಗಾಗಿ ಸಂಪರ್ಕಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಕುನಾಲ್​ ಅವರು ಇನ್​ಸ್ಟಾ ಪೋಸ್ಟ್​ ಮಾತ್ರ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)