ಸಿನಿವಾಣಿ

'ಕುಳ್ಳನ ಹೆಂಡತಿ' ಟ್ರೈಲರ್ ಬಂತು; ಅಕ್ಟೋಬರ್​ನಲ್ಲಿ ಚಿತ್ರ ಬಿಡುಗಡೆ

chetannadiger

ಬೆಂಗಳೂರು: 'ಕುಳ್ಳನ ಹೆಂಡತಿ' ಎಂಬ ಟೈಟಲ್​ ಕೇಳಿದಾಕ್ಷಣ ಏನನ್ನಿಸುತ್ತದೆ? ಇಲ್ಲಿ ಗಂಡ ಕುಳ್ಳ ಇರಬಹುದು ಎಂದನಿಸಬಹುದು. ಆದರೆ, ನಿರ್ದೇಶಕ ವಿಶಾಖ್​, 'ಕುಳ್ಳನ ಹೆಂಡತಿ' ಎಂದು ಚಿತ್ರಕ್ಕೆ ಹೆಸರಿಟ್ಟು ವಿಭಿನ್ನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ.

ಸ್ಟಾರ್ ವೆಂಚರ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ 'ಕುಳ್ಳನ ಹೆಂಡತಿ‌' ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ಹಾಗೂ ರಾಸಿಕಾ ಬೀರೇಂದ್ರ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿದಿದ್ದು, ಇತ್ತೀಚೆಗೆ ಟ್ರೇಲರ್​ ಬಿಡುಗಡೆಯಾಗಿದೆ.

'ಕುಳ್ಳನ ಹೆಂಡತಿ‌' ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ವಿಶಾಖ್​, ಈ ಚಿತ್ರಕ್ಕೆ ಅವರದ್ದೇ ಕಥೆ ಸ್ಫೂರ್ತಿಯಂತೆ. '26ರ ಹರೆಯದ ಯುವಕನಿಗೆ 33ರ ವಯಸಿನ ನರ್ಸ್ ಮೇಲೆ ಲವ್ ಆದರೆ ಹೇಗಿರುತ್ತೆ ಎಂಬುದನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ಒಂದು ಸುಂದರ ಲವ್ ಸ್ಟೋರಿ ಇದಾಗಿದ್ದು, 45 ದಿನಗಳ‌ ಕಾಲ ಚಿತ್ರೀಕರಣ ಮಾಡಿದ್ದೇವೆ. ನನ್ನ ಹೆಂಡತಿಯೂ ಸಹ ನನಗಿಂತ ದೊಡ್ಡವರು. ಅದೂ ಕೂಡ ಈ ಚಿತ್ರಕಥೆಗೆ ಸ್ಪೂರ್ತಿಯಾಗಿದೆ. ಡಾಕ್ಟರ್ ಹಾಗೂ ರೋಗಿಯ ನಡುವಿನ ಕಥೆಯ ಜತೆಗೆ ಹೈಟ್ ಹಾಗೂ ವಯಸ್ಸಿನ ಅಂತರದ ಸಿನಿಮಾ ಇದಾಗಿದೆ. ನಮ್ಮ‌ ಚಿತ್ರವು 2020ರಲ್ಲೇ ಶುರುವಾಗಿತ್ತು. ಇದೇ ಅಕ್ಟೋಬರ್​​ನಲ್ಲಿ ಚಿತ್ರ ಮಾಡುವ ಯೋಚನೆಯಿದೆ' ಎನ್ನುತ್ತಾರೆ.

ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಪರಮ್ ನಿರ್ವಿಕಾರ್ ಸಂಗೀತ ಸಂಯೋಜಿಸಿದ್ದಾರೆ. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳಿಗೆ ಮತ್ತು ಆಲ್ಬಂ ಸಾಂಗ್​ಗಳಿಗೆ ಸಂಗೀತ ಸಂಯೋಜಿಸಿದ್ದ ಅವರು ಇದೇ ಮೊದಲ ಬಾರಿಗೆ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಅಶ್ರಿತ್ ವಿಶ್ವನಾಥ್ ಮತ್ತು ರಾಸಿಕಾ ಬೀರೇಂದ್ರ ಜತೆಗೆ ದೀಪಿಕಾ, ಅರಸೀಕೆರೆ ರಾಜು, ಕೆಂಚಣ್ಣ, ಜಯಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.