More

    ಸಮಯದೊಂದಿಗೇ ಸ್ಪರ್ಧೆಗೆ ಬಿದ್ದಿದ್ದರಾ ಎಸ್​.ಪಿ. ಬಾಲಸುಬ್ರಹ್ಮಣ್ಯಂ!

    ಬೆಂಗಳೂರು: ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಎಲ್ಲರನ್ನೂ ಅಗಲಿ ಇದೇ ಸೆ. 25ಕ್ಕೆ ಭರ್ತಿ ಎರಡು ವರ್ಷ. ಇಂದು ಅವರು ಉಸಿರಾಗಿ ಇಲ್ಲವಾದರೂ ಸ್ವರವಾಗಿ ಎಂದೆಂದಿಗೂ ಜೀವಂತ ಎಂದರೂ ತಪ್ಪೇನಲ್ಲ.

    74 ವರ್ಷಗಳ ಕಾಲ ಜೀವಿಸಿದ್ದ ಅವರು ಸುಮಾರು ಐವತ್ತು ವರ್ಷಗಳನ್ನು ಗಾಯನದಲ್ಲಿ ತೊಡಗಿಸಿಕೊಂಡಿದ್ದರು. ಈ ಸುದೀರ್ಘ ಅವಧಿಯಲ್ಲಿ ಒಟ್ಟು 16 ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ದನಿಯಾಗಿರುವ ಅವರು ಸಂಗೀತಪ್ರಿಯರ ಮನಸಲ್ಲಿ ಈಗಲೂ ಗುನುಗುತ್ತಲೇ ಇದ್ದಾರೆ, ಇರುತ್ತಾರೆ.

    ಅಂಥ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ‘ಸಮಯದೊಂದಿಗೇ ಸ್ಪರ್ಧೆಗೆ ಬಿದ್ದಿದ್ದರಾ?’ ಎಂಬ ಪ್ರಶ್ನೆಯೊಂದು ಯಾರಲ್ಲಾದರೂ ಮೂಡಿದ್ದರೆ ಅದು ಅಚ್ಚರಿಯೇನಲ್ಲ. ಏಕೆಂದರೆ ಅವರು ಕೆಲವೊಮ್ಮೆ ಅದೇ ರೀತಿಯಲ್ಲಿ ಹಾಡಿದ್ದರು. ಸಮಯದೊಂದಿಗೆ ಜಿದ್ದಿಗೆ ಬಿದ್ದಂತೆ ಹಾಡಿದ್ದ ಅವರು ಅದೇ ಕಾರಣಕ್ಕೆ ದಾಖಲೆಯನ್ನೂ ಮಾಡಿದ್ದರು.

    ಅಂಥ ದಾಖಲೆಯನ್ನು ಅವರು ಕನ್ನಡದಲ್ಲಿ ಮಾಡಿದ್ದಾರೆಂಬುದು ಕನ್ನಡಿಗರಿಗೆ ಸಂತೋಷದ ಸಂಗತಿ. 1981ರ ಫೆ. 8ರಂದು ಎಸ್​ಪಿಬಿ ಅವರು ಒಂದೇ ದಿನದಲ್ಲಿ ಅಂಥದ್ದೊಂದು ಸಾಧನೆ ಮಾಡಿದ್ದರು. ಒಂದು ದಿನ ಎನ್ನುವುದಕ್ಕಿಂತಲೂ ಬರೀ ಅರ್ಧ ದಿನದಲ್ಲಿ ಎಂದರೂ ಸರಿಯೇ. ಏಕೆಂದರೆ, ಅಂದು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗಿನ 12 ಗಂಟೆಗಳ ಅವಧಿಯಲ್ಲಿ ಅವರು 21 ಗೀತೆಗಳನ್ನು ಹಾಡಿದ್ದರು.

    ಹಾಗಂತ ಅವರ ಇಂಥ ಸಾಧನೆ ಬರೀ ಕನ್ನಡದಲ್ಲಷ್ಟೇ ಅಲ್ಲ, ಇತರ ಭಾಷೆಗಳಲ್ಲೂ ಇಂಥದ್ದೇ ಸಾಧನೆ ಮಾಡಿದ್ದಾರೆ. ತಮಿಳಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳಿಗೆ ದನಿಯಾಗಿದ್ದ ಎಸ್​ಪಿಬಿ, ಹಿಂದಿಯಲ್ಲಿ ಒಂದೇ ದಿನದಲ್ಲಿ 16 ಹಾಡುಗಳನ್ನು ಹಾಡಿದ್ದರು. ಇವು ಕೂಡ ದಾಖಲೆ ಅನಿಸಿಕೊಂಡಿವೆ.

    8 ಗಂಟೆ, 1 ಸಾವಿರ ಸಂಭಾವನೆ

    ಎಸ್​​.ಪಿ.ಬಾಲಸುಬ್ರಹ್ಮಣ್ಯಂ ಅವರು ಸಮಯದೊಂದಿಗೆ ಜಿದ್ದಿಗೆ ಬಿದ್ದು ದಾಖಲೆ ಎಂಬಂತೆ ಹಾಡಿದ್ದರೂ ಅಲ್ಲಲ್ಲಿ ಅವರು ಕೆಲವೊಂದು ಹಾಡಿಗೆ ಸಮಯವನ್ನು ಲೆಕ್ಕಿಸದೆ ದನಿಯಾಗಿದ್ದೂ ಇದೆ. ಅಂಥ ಒಂದು ಸಂಗತಿ ಕೂಡ 1981ರ ಜತೆ ಸಂಬಂಧ ಹೊಂದಿದೆ ಎಂಬುದು ಕಾಕತಾಳೀಯ.

    1981ರಲ್ಲಿ ಒಂದೇ ದಿನದಲ್ಲಿ 21 ಹಾಡುಗಳನ್ನು ಹಾಡಿದ್ದ ಎಸ್​ಪಿಬಿ, ಇನ್ನೊಮ್ಮೆ ಬರೀ ಎರಡು ಗೀತೆಗಳಿಗೆ ಬರೋಬ್ಬರಿ 8 ಗಂಟೆ ಸಮಯ ನೀಡಿದ್ದರು. 1981ರ ಸುಮಾರಿಗೆ ಬಿಡುಗಡೆ ಆಗಿದ್ದ ತುಳು ಸಿನಿಮಾ ‘ಭಾಗ್ಯವಂತೆದಿ’ಯಲ್ಲಿನ 2 ಗೀತೆಗಳಿಗೆ ಅವರು ಧ್ವನಿಯಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರದ ಗೀತೆಗಳಿಗೆ ಅಂದು ಚೆನ್ನೈಯಲ್ಲಿ ರೆಕಾರ್ಡಿಂಗ್ ಆಗಿತ್ತು. ಹಾಗೆ ಅಂದು 2 ಹಾಡುಗಳ ಗಾಯನಕ್ಕೆ 8 ಗಂಟೆಗಳು ತಗುಲಿದ್ದರೂ ಎಸ್​ಪಿಬಿ ಸ್ವೀಕರಿಸಿದ್ದ ಸಂಭಾವನೆ ಒಂದು ಸಾವಿರ ರೂಪಾಯಿ ಮಾತ್ರ.

    ‘ಜೊತೆಯಲಿ ಜೊತೆಜೊತೆಯಲಿ..’ 9 ಗಂಟೆ..

    ಒಂದೇ ದಿನದಲ್ಲಿ ಒಮ್ಮೆ 21 ಗೀತೆ, ಇನ್ನೊಮ್ಮೆ ಒಂದೇ ದಿನದಲ್ಲಿ 19, ಮತ್ತೊಮ್ಮೆ ಒಂದೇ ದಿನದಲ್ಲಿ 16 ಗೀತೆಗಳಿಗೆ ದನಿಯಾಗಿದ್ದ ಎಸ್​ಪಿಬಿ, ಒಂದೇ ಹಾಡಿಗೆ ಒಂಬತ್ತು ದಿನಗಳ ಕಾಲ ಹಾಡಿದ್ದೂ ಇದೆ. ಅದು ಕೂಡ ಕನ್ನಡದಲ್ಲೇ ಎಂಬುದು ಮತ್ತೊಂದು ವಿಶೇಷ. ಕರಾಟೆ ಕಿಂಗ್​ ಶಂಕರ್​ನಾಗ್ ಅಭಿನಯದ ‘ಗೀತಾ’ ಚಿತ್ರದ ‘ಜೊತೆಯಲಿ ಜೊತೆಜೊತೆಯಲಿ..’ ಗೀತೆಗೆ ಎಸ್​ಪಿಬಿ ತಮ್ಮ 9 ದಿನಗಳನ್ನು ನೀಡಿದ್ದರು. ಇಳಯರಾಜ ಅವರ ಸಂಗೀತ ಸಂಯೋಜನೆಯ ಗೀತೆಯನ್ನು ಎಸ್​ಪಿಬಿ ಚೆನ್ನಾಗಿಯೇ ಹಾಡಿದ್ದರೂ ಅವರಿಗೇ ಅದೇನೋ ಸಮಾಧಾನವಾಗಿರಲಿಲ್ಲ. ‘ಇದನ್ನು ಇನ್ನೂ ಚೆನ್ನಾಗಿ ಹಾಡಬೇಕು, ಇನ್ನೊಮ್ಮೆ ಪ್ರಯತ್ನಿಸುತ್ತೇನೆ..’ ಎಂದು ಪುನಃ ಪುನಃ ಹಾಡಿದ್ದ ಅವರು ಕೊನೆಗೆ ಒಂಬತ್ತನೆಯ ದಿನದಲ್ಲಿನ ಪ್ರಯತ್ನಕ್ಕೆ ತೃಪ್ತರಾದರು. ಹೀಗೆ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ಬಿಡುವಿಲ್ಲದೆ ಹಾಡಿದ್ದೂ ಇದೆ, ಗಡುವಿಲ್ಲದೆ ಹಾಡಿದ್ದೂ ಇದೆ.

    ಮಗನಿಗೆ ಉಗ್ರರ ನಂಟು, ನೊಂದ ತಂದೆ ಹೃದಯಾಘಾತಕ್ಕೀಡಾಗಿ ಸಾವು..

    ತುಂಡಾದ ಕಾಲಿನೊಂದಿಗೆ ಆಸ್ಪತ್ರೆಗೆ ಬಂದ ಗಾಯಾಳು; ಯಶಸ್ವಿಯಾಗಿ ಜೋಡಿಸಿದ ವೈದ್ಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts