ಸಿನಿವಾಣಿ

ಹರಿಪ್ರಿಯಾಗೆ ಇಂದು ಏನು ಸಿಕ್ತು ಗೊತ್ತಾ?

chetannadiger

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ತಮ್ಮ ಬೇಬ್​ ನೋಸ್​ ಡಾಟ್​ಕಾಮ್​ನಲ್ಲಿ ಹಲವು ವಿಷಯಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಹರಿಪ್ರಿಯಾ. ದಿನಾ ಒಂದಿಲ್ಲೊಂದು ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಲಾಕ್​ಡೌನ್​ ಸಮಯದಲ್ಲೂ ತಮ್ಮ ಅಭಿಮಾನಿಗಳ ಮನರಂಜಿಸುತ್ತಿದ್ದಾರೆ.

ಇದೀಗ ಹರಿಪ್ರಿಯಾ, ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಇಂದು ಏನೋ ಹುಡುಕುವ ಸಂದಭರ್ದಲ್ಲಿ ಅವರಿಗೆ ತಮ್ಮ ನಾಮಕರಣ ಆಹ್ವಾನಪತ್ರಿಕೆ ಸಿಕ್ಕಿದೆ. 1992ರ ಮಾರ್ಚ್​​ 23ರಂದು ಹರಿಪ್ರಿಯಾ ಅವರ ನಾಮಕರಣವು ಚಿಕ್ಕಬಳ್ಳಾಪುರದ ತಮ್ಮ ಸ್ವಗೃಹದಲ್ಲಿ ನಡೆದಿದೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಹರಿಪ್ರಿಯಾ, 'ಇಂದು ಏನೋ ಹುಡುಕುವಾಗ ನನಗೆ ನನ್ನ ನಾಮಕರಣ ಆಹ್ವಾನಪತ್ರಿಕೆ ಸಿಕ್ಕಿತು. ನನ್ನ ನಾಮಕರಣದ ಆಹ್ವಾನ ಪತ್ರಿಕೆ ನನಗೇ ಸಿಕ್ಕಿರುವುದು ನಾನೆಷ್ಟು ಲಕ್ಕಿ ಅಲ್ವಾ?' ಎಂದು ಟ್ವೀಟ್​ ಮಾಡಿಕೊಂಡಿದ್ದಾರೆ.

ಹರಿಪ್ರಿಯಾ ಅವರಿಗೆ ನಾಮಕರಣದ ಸಂದರ್ಭದಲ್ಲಿ, ಅವರ ತಂದೆ-ತಾಯಿ ಇಟ್ಟ ಹೆಸರು ಶ್ರುತಿ. ಆ ನಂತರ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ, ಅವರ ಹೆಸರನ್ನು ಬದಲಾಯಿಸಲಾಯಿತು. ಅಷ್ಟರಲ್ಲಾಗಲೇ ಶ್ರುತಿ ಎಂಬ ನಾಯಕಿ ಇದ್ದಿದ್ದರಿಂದ, ಗೊಂದಲವಾಗದಿರಲಿ ಎಂಬ ಕಾರಣಕ್ಕೆ, ಅವರಿಗೆ ಹರಿಪ್ರಿಯಾ ಎಂಬ ಹೆಸರನ್ನು ಇಡಲಾಯಿತು.

ಅಲ್ಲಿಂದ ಇಲ್ಲಿಯವರೆಗೂ, ಅದೇ ಹೆಸರಿನಲ್ಲಿ ಗುರುತಿಸಿಕೊಂಡಿರುವ ಹರಿಪ್ರಿಯಾ, ಕನ್ನಡ ಚಿತ್ರರಂಗದಲ್ಲಿ ಒಂದು ದಶಕದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ಕೆಲವು ಚಿತ್ರಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.