Kichcha Sudeep : ಕನ್ನಡ ಚಿತ್ರರಂಗದ ಧ್ರುವತಾರೆ, ಸ್ಟೈಲ್ ಐಕಾನ್, ಅಭಿನಯ ಚಕ್ರವರ್ತಿ ಹಾಗೂ ಎಲ್ಲರ ನೆಚ್ಚಿನ ಬಾದ್ಷಾ ಕಿಚ್ಚ ಸುದೀಪ್ ಇಂದು (ಸೆ.02) 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಮೂಲಿಯಂತೆಯೇ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿನಿಮಾಗಳ ಅಪ್ಡೇಟ್ನೊಂದಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಪ್ರತಿಬಾರಿ ಮನೆಯ ಮುಂದೆ ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್ ಮತ್ತು ಗಿಫ್ಟ್ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸುದೀಪ್ ಅವರ ತಮ್ಮ ಮನೆಯ ಮುಂದೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ತಮ್ಮ ತಾಯಿ ತೀರಿ ಇನ್ನು ವರ್ಷ ಕೂಡ ಕಳೆಯದೇ ಇರುವುದರಿಂದ ಮನೆಯಲ್ಲಿ ಸಂಭ್ರಮಾಚರಣೆ ಮಾಡಲಿಲ್ಲ. ಆದರೂ ಅಭಿಮಾನಿಗಳಿಗೆ ನಿರಾಸೆ ಮಾಡದೇ ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಅಭಮಾನಿಗಳ ಸಮ್ಮುಖದಲ್ಲಿ ಸುದೀಪ್ ಅವರು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ನಿನ್ನೆ ಕಿಚ್ಚ 47 ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಮಾರ್ಕ್ ಎಂದು ಹೆಸರಿಡಲಾಗಿದ್ದು, ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದಂದು ಬಿಡುಗಡೆಯಾಗುತ್ತದೆ. ಈ ಚಿತ್ರದನ್ನು ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರೇ ನಿರ್ದೇಶಿಸಿದ್ದಾರೆ. ಎರಡನೇ ಭಾರಿ ಯಶಸ್ವಿ ಸಿನಿಮಾ ತಂಡ ಒಟ್ಟಿಗೆ ಸೇರಿದೆ.
ಹೌದು, ಎಲ್ಲ ನಿರೀಕ್ಷೆ ಇರುವುದು ಬಿಲ್ಲ ರಂಗ ಬಾಷಾ ಸಿನಿಮಾದ ಮೇಲೆ. ಸುದೀಪ್ ಅವರೇ ಹೇಳಿದಂತೆ ಇದು ಅವರ ವೃತ್ತಿಜೀವನದ ಅತಿದೊಡ್ಡ ಸಿನಿಮಾ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ಒಂದು ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಹುಟ್ಟುಹಬ್ಬ ಹಿನ್ನೆಲೆ ಇಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಅನೂಪ್ ಭಂಡಾರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಿದ್ದು, ಅದರಲ್ಲಿ ಒಂದು ಪಾತ್ರವನ್ನು ಪರಿಚಯಿಸಿದ್ದಾರೆ. ಪೋಸ್ಟರ್ನಲ್ಲಿ ನೀಡಿರುವ ಸುಳಿವು ಪ್ರಕಾರ ಬಾಷಾ ಪಾತ್ರವನ್ನು ಅನೂಪ್ ಪರಿಚಯಿಸಿದ್ದಾರೆ. ಪೋಸ್ಟರ್ನಲ್ಲಿ ಸುದೀಪ್ ಅವರು ದೊಡ್ಡ ಬಂದೂಕು ಹಿಡಿದಿದ್ದು, ಅದರಲ್ಲಿ ತ್ರಿಶೂಲ ಗುರುತು ಇದೆ. ಪೋಸ್ಟರ್ನ ಒಂದು ಬದಿಯಲ್ಲೂ ತ್ರಿಶೂಲ ಗುರುತು ಇದೆ. ಇನ್ನು ಟೈಟಲ್ನಲ್ಲಿ ತ್ರಿಶೂಲ ಗುರುತು ಸೂಚಿಸುವುದು ಬಾಷಾ ಪಾತ್ರಕ್ಕೆ. ಅಂದಹಾಗೆ ಬಿಲ್ಲ ರಂಗ ಬಾಷಾ ಪಾತ್ರಗಳು ಬ್ರಹ್ಮ ವಿಷ್ಣು ಮಹೇಶ್ವರನಿಗೆ ಲಿಂಕ್ ಆಗುತ್ತದೆ. ಬಿಲ್ಲ ಕಮಲದ ಗುರುತನ್ನು ಹೊಂದಿದೆ ಅಂದರೆ, ಅದು ಬ್ರಹ್ಮನ ಗುರುತು. ಅದೇ ರೀತಿ ರಂಗ ಸುದರ್ಶನ ಚಕ್ರ ಗುರುತು ಇದೆ. ಅದು ವಿಷ್ಣುವಿನ ಗುರುತು ಮತ್ತು ತ್ರಿಶೂಲ ಮಹೇಶ್ವರನ ಗುರುತು. ಹೀಗಾಗಿ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
ಬಿಆರ್ಬಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ಕಿಚ್ಚ ಸುದೀಪ್ ಅವರಿಗೆ ಶುಭ ಕೋರಿದ್ದಾರೆ. ಜನ್ಮದಿನದ ಶುಭಾಶಯಗಳು ಸರ್, ಈ ವರ್ಷವೂ ನಿಮ್ಮ ಪರಂಪರೆಯಷ್ಟೇ ಜೋರಾಗಿ ಘರ್ಜಿಸಲಿ ಎಂದಿದ್ದಾರೆ. ಅಲ್ಲದೆ, ಪ್ರತಿಯೊಂದು ಸಾಮ್ರಾಜ್ಯವೂ ಮಂಡಿಯೂರಿ ನಿರಾಕರಿಸುವವನಿಗೆ ಹೆದರುತ್ತದೆ ಎಂದು ಪೋಸ್ಟರ್ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೆ, ನೀವು ಬಂಡಾಯಗಾರನನ್ನು ಸಾಯಿಸಬಹುದು ಆದರೆ, ದಂಗೆಯನ್ನಲ್ಲ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಈ ಚಿತ್ರದ ಪರಿಕಲ್ಪನೆಯೇ ವಿಭಿನ್ನವಾಗಿದ್ದು, ಈಗಾಗಲೇ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಈ ಸಿನಿಮಾ ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.
ಅಂದಹಾಗೆ ಬಿಲ್ಲಾ ರಂಗ ಬಾಷಾ ಸಿನಿಮಾ ಕಥೆಯು 2209 A.D ನಲ್ಲಿ ನಡೆಯುತ್ತದೆ. ಅಂದರೆ ಮುಂದಿನ 200 ವರ್ಷಗಳ ಕಾಲ್ಪನಿಕ ಕತೆ ಇದಾಗಿದ್ದು, ಸ್ಟೋರಿ ಲೈನ್ನಿಂದಲೇ ಬಿಲ್ಲ ರಂಗ ಬಾಷಾ ಸಿನಿಮಾ ಅಭಿಮಾನಿಗಳಲ್ಲಿ ಹೊಸ ಕಿಚ್ಚು ಹುಟ್ಟುಹಾಕಿದೆ. ಕನ್ನಡದ ಮಟ್ಟಿಗೆ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಅವರು ಕೈಹಾಕಿದ್ದಾರೆ.
ಬಿಲ್ಲ ರಂಗ ಬಾಷಾ ಸಿನಿಮಾ 2018ರಲ್ಲೇ ಘೋಷಣೆಯಾಯಿತು. ವಿಕ್ರಾಂತ್ ರೋಣ ಸಿನಿಮಾಗೂ ಮುಂಚೆಯೇ ಅನೂಪ್ ಅವರು ಬಿಆರ್ಬಿ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ, ಆಗಿನ್ನು ಸ್ಕ್ರಿಪ್ಟ್ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ. ಅಲ್ಲದೆ, ಇದೊಂದು ಫ್ಯೂಚರಿಸ್ಟಿಕ್ ಸಿನಿಮಾ ಆಗಿದ್ದು, ಸಾಕಷ್ಟು ಪ್ಲಾನಿಂಗ್ ಬೇಕಿತ್ತು ಮತ್ತು ಬಿಗ್ ಬಜೆಟ್ ಸಿನಿಮಾ ಆಗಿದ್ರಿಂದ ಸಾಕಷ್ಟು ತಯಾರಿ ಬೇಕಿತ್ತು. ಈ ಕಾರಣಕ್ಕೆ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಇದರ ನಡುವೆ ವಿಕ್ರಾಂತ್ ರೋಣ ಸಿನಿಮಾ ಮಾಡಿದರು. ಅಂದಹಾಗೆ, ವಿಕ್ರಾಂತ್ ರೋಣ ಸಿನಿಮಾ ಸುದೀಪ್ ಅವರಿಗಾಗಿ ಬರೆದ ಕತೆಯಲ್ಲ. ಆದರೆ, ಸುದೀಪ್ ಅವರಿಗೆ ಆ ಕತೆ ಇಷ್ಟ ಆಗಿ ತಾವೇ ಆ ಸಿನಿಮಾ ಮಾಡಿದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.