ಸಿನಿವಾಣಿ

ಇದೇ ವರ್ಷ ಕಿಚ್ಚ46 : 50ನೇ ಚಿತ್ರದ ಕಥೆಯನ್ನೂ ಕೇಳಿದ್ದಾರಂತೆ ಕಿಚ್ಚ ಸುದೀಪ್​

| ಹರ್ಷವರ್ಧನ್​ ಬ್ಯಾಡನೂರು

ನಟ ಕಿಚ್ಚ ಸುದೀಪ್​ ಕೆಲ ದಿನಗಳಿಂದ ಬೇಡದ ಕಾರಣಗಳಿಂದ ಸುದ್ದಿಯಲ್ಲಿದ್ದರು. ಇದೀಗ, ವಿವಾದಕ್ಕೆ ಬ್ರೇಕ್​ ಹಾಕಿ, ಶೂಟಿಂಗ್​ ಸೆಟ್​ ಸೇರಿಕೊಂಡಿದ್ದಾರೆ. ಕಾಲಿವುಡ್​ನ ಖ್ಯಾತ ನಿರ್ಮಾಪಕ ಕಲೈಪುಲಿ ತನು ನಿರ್ಮಿಸುತ್ತಿರುವ, ವಿಜಯನ್​ ಆ್ಯಕ್ಷನ್​&ಕಟ್​ ಹೇಳುತ್ತಿರುವ "ಕಿಚ್ಚ 46' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಸದ್ಯ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ವಿಜಯವಾಣಿ ಜತೆ ತಾವು ತೆಗೆದುಕೊಂಡಿದ್ದ ಬ್ರೇಕ್​ ಬಗ್ಗೆ, ಈ ಚಿತ್ರ, ಮುಂದಿನ ಪ್ರಾಜೆಕ್ಟ್​ಗಳು ಸೇರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಡಿಸೆಂಬರ್​ನಲ್ಲಿ ಕಿಚ್ಚ 46 ರಿಲೀಸ್​
ಕಳೆದ ಜುಲೈನಲ್ಲಿ ತಮಿಳು ನಿರ್ಮಾಪಕ ಕಲೈಪುಲಿ ತನು ಕಿಚ್ಚ ಸುದೀಪ್​ ಬಳಿ ತಮಿಳು ಸಿನಿಮಾ ಮಾಡಲು ಬಂದರಂತೆ. "ಆದರೆ, "ಕೆಜಿಎ್​', "ಕಾಂತಾರ' ಚಿತ್ರಗಳಂತೆ ಕನ್ನಡದಲ್ಲಿ ಸಿನಿಮಾ ಮಾಡಿ ನಂತರ ತಮಿಳು ಸೇರಿ ಪ್ಯಾನ್​ ಇಂಡಿಯಾ ಹೋಗೋಣ ಎಂದು ತಿಳಿಸಿದೆ. ನನ್ನ ಮಾತಿಗೆ ಅವರೂ ಒಪ್ಪಿದರು. ಇದೀಗ ಚಿತ್ರೀಕರಣ ನಡೆಯುತ್ತಿದೆ. ಬಹುತೇಕ ಕನ್ನಡದ ಕಲಾವಿದರು, ಛಾಯಾಗ್ರಾಹಕ ಶೇಖರ್​ ಚಂದ್ರ, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಸೇರಿ ಹಲವು ತಂತ್ರಜ್ಞರು ಚಿತ್ರತಂಡದಲ್ಲಿರುವುದು ಮತ್ತೊಂದು ಖುಷಿ' ಎಂದು ಸಂತಸ ಹಂಚಿಕೊಳ್ಳುವ ಸುದೀಪ್​, "ಇದೇ ವರ್ಷ ಸಿನಿಮಾ ರಿಲೀಸ್​ ಮಾಡಲು ಹಠ ಹಿಡಿದು ಕುಳಿತಿದ್ದೇನೆ' ಎಂದೂ ಹೇಳಿಕೊಳ್ಳುತ್ತಾರೆ. ಮಹಾಬಲಿಪುರಂನಲ್ಲಿ ಇದೇ 29ರವರೆಗೆ ಚಿತ್ರೀಕರಣ ನಡೆಯಲಿದ್ದು, ನಂತರ ಚಿತ್ರತಂಡ ಬ್ರೇಕ್​ ಪಡೆಯಲಿದೆ. ಬಳಿಕ ಪಾಂಡಿಚೆರಿಯಲ್ಲಿ ಶೂಟಿಂಗ್​ ನಡೆಸುವ ಆಲೋಚನೆ ಚಿತ್ರತಂಡದ್ದು.

ಐದು ಸಿನಿಮಾಗಳು ಲೈನಪ್​
"ಕಿಚ್ಚ 46' ಜತೆಗೆ ನಾಲ್ಕು ಕಥೆಗಳನ್ನು ಕಿಚ್ಚ ಸುದೀಪ್​ ಓಕೆ ಮಾಡಿದ್ದಾರೆ. "50ನೇ ಚಿತ್ರವೂ ಲೈನಪ್​ನಲ್ಲಿದೆ' ಎಂದು ಹೇಳಿಕೊಳ್ಳುವ ಅವರು, ಮತ್ತೆ ನಿರ್ದೇಶಿಸುವ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲವಂತೆ. "ನನಗಾಗಿ ಪ್ರೀತಿಯಿಂದ ಕಥೆ ಮಾಡಿಕೊಂಡು ಬರುತ್ತಾರೆ. ಅವರಿಗೆ ಮೊದಲ ಆದ್ಯತೆ. ನನಗಾಗಿ ಕಥೆ ಮಾಡಿಕೊಂಡು ಬರುವವರೆಗೂ ನಾನು ನಟಿಸಲು ಇಷ್ಟಪಡುತ್ತೇನೆ' ಎನ್ನುತ್ತಾರೆ.

ಕರೋನಾ, ಬ್ರೇಕ್​ ಮತ್ತು ಕ್ರಿಕೆಟ್​
ಕಳೆದ ವರ್ಷ ತೆರೆಕಂಡ "ವಿಕ್ರಾಂತ್​ ರೋಣ' ಬಳಿಕ ಸುದೀಪ್​ "ಕಬ್ಜ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ನಾಯಕನಾಗಿ ನಟಿಸಿರಲಿಲ್ಲ. ಕರೋನಾ ಮೂರನೇ ಅಲೆಯ ಸಮಯದಲ್ಲಿ ಅನಾರೋಗ್ಯಕ್ಕೆ ಸಿಲುಕಿದ್ದ ಅವರಿಗೆ ಅದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯವೇ ಹಿಡಿಯಿತು. ಬಳಿಕ ಬ್ರೇಕ್​ ತೆಗೆದುಕೊಂಡ ಸುದೀಪ್​, ಸಿಸಿಎಲ್​ (ಸೆಲೆಬ್ರಿಟಿ ಕ್ರಿಕೆಟ್​ ಲೀಗ್​), ಕೆಸಿಸಿ (ಕನ್ನಡ ಚಲನಚಿತ್ರ ಕಪ್​) ಅಂತ ಕ್ರಿಕೆಟ್​ನತ್ತ ಗಮನ ಹರಿಸಿದ್ದರು. "ಮೊದಲಿನಂತೆ ಫಿಟ್​ ಆಗಲು ಸುಮಾರು ಒಂಬತ್ತು ತಿಂಗಳ ಸುದೀರ್ ಸಮಯವೇ ಬೇಕಾಯಿತು. ಪ್ರತಿದಿನ ಕೇವಲ ಐದು ನಿಮಿಷ ವರ್ಕೌಟ್​ನಿಂದ ಪ್ರಾರಂಭಿಸಿ, ಕ್ರಮೇಣ ಸಮಯ ಹೆಚ್ಚಿಸುತ್ತಾ ಹೋದೆ' ಎಂದು ಹೇಳಿಕೊಳ್ಳುವ ಸುದೀಪ್​, ಇದೀಗ ಮೊದಲಿಗಿಂತ ಫಿಟ್​ ಆಗಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ.