‘ದಸರಾ’ ಸಕ್ಸಸ್ ಬಳಿಕ ತೆಲುಗು ನಟ ನಾನಿ ನಟಿಸುತ್ತಿರುವ ಹೊಸ ಸಿನಿಮಾ ‘ಹಾಯ್ ನಾನ್ನ’. ಇದು ಅವರು ನಾಯಕನಾಗಿರುವ 30ನೇ ಚಿತ್ರವಾಗಿದ್ದು, ಯುವ ನಿರ್ದೇಶಕ ಶೌರ್ಯುವ್ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ಎಮೋಷನಲ್ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಕಥೆಯಾಗಿದ್ದು ಅಪ್ಪ-ಮಗಳ ಬಾಂಧವ್ಯದ ಸುತ್ತ ಸಿನಿಮಾ ಸಾಗುತ್ತದೆ.
‘ಹಾಯ್ ನಾನ್ನ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂದು ಹಾಡು ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಚಿತ್ರತಂಡ ಎರಡನೇ ಸಾಂಗ್ ರಿಲೀಸ್ ಮಾಡಿದೆ. ಕನ್ನಡದಲ್ಲಿ ‘ಮಗಳಲ್ಲ ನೀ ನನ್ನ ಅಮ್ಮ…’ ಎಂದು ಸಾಗುವ ಈ ಹಾಡು ಕವಿರಾಜ್ ಸಾಹಿತ್ಯ, ಹೇಶಬ್ ಅಬ್ದುಲ್ ವಹಾಬ್ ಸಂಗೀತದಲ್ಲಿ ಮೂಡಿಬಂದಿದೆ.
ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಈ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ವಿಶೇಷ ಅಂದರೆ 2012ರಲ್ಲಿ ರಿಲೀಸ್ ಆದ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಈಗ’ ಚಿತ್ರದಲ್ಲಿ ಸುದೀಪ್ ಮತ್ತು ನಾನಿ ಒಟ್ಟಿಗೆ ನಟಿಸಿದ್ದರು. ‘ಹಾಯ್ ನಾನ್ನ’ ಚಿತ್ರದಲ್ಲಿ ನಾನಿಗೆ ಮೃನಾಲ್ ಠಾಕುರ್ ನಾಯಕಿಯಾಗಿದ್ದು, ಬೇಬಿ ಕಿಯಾರಾ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
-ಏಜೆನ್ಸೀಸ್