ಬೆಂಗಳೂರು: ಸ್ಟಾರ್ ಎಂದಮೇಲೆ ಬಹುತೇಕ ಎಲ್ಲರೂ ಸಿಕ್ಸ್ ಪ್ಯಾಕ್ ತೋರಿಸುತ್ತಾರೆ, ಎದೆಗಾರಿಕೆ ತೋರುತ್ತಾರೆ. ಆದರೆ ಕಿಚ್ಚ ಸುದೀಪ್ ಫಾರ್ ಎ ಚೇಂಜ್ ಬೆನ್ನಲ್ಲೇ ಚಿತ್ತಾರ ತೋರಿದ್ದಾರೆ. 'ಫ್ಯಾಂಟಮ್' ಪ್ರಪಂಚ ಅವರನ್ನು ಹೀಗೆಲ್ಲ ಮಾಡಿಸಿದೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಅದರಲ್ಲಿನ ಒಂದು ಝಲಕ್ ಹಂಚಿಕೊಂಡಿದ್ದಾರೆ ಸುದೀಪ್. ಸಿನಿಮಾದ ಕ್ಲೈಮ್ಯಾಕ್ಸ್ಗಾಗಿ ಕಳೆದ ಒಂದು ತಿಂಗಳಿಂದ ಎಲ್ಲರೂ ದಣಿದಿರುವ ಬಗ್ಗೆ ಹೇಳಿಕೊಂಡಿದ್ದಾರೆ ಕಿಚ್ಚ.
ಈ ಮಧ್ಯೆ ತಮ್ಮ ಕಟ್ಟುಮಸ್ತಾದ ದೇಹ, ಅದರಲ್ಲೂ ಹುರಿಗೊಳಿಸಿದ ಬೆನ್ನಿನ ಗಮನ ಸೆಳೆಯುವ ಚಿತ್ರವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸುದೀಪ್, ಬಹಳ ದಿನಗಳ ಬಳಿಕ ವರ್ಕ್ ಔಟ್ ಆರಂಭಿಸಿರುವ ಕುರಿತೂ ಹೇಳಿಕೊಂಡಿದ್ದಾರೆ.
ಒಳ್ಳೇ ಫುಡ್ಡು, ಡೀಸೆಂಟ್ ಲೈಫ್ಸ್ಟೈಲ್, ಸ್ವಲ್ಪ ಶಿಸ್ತು.. ಕೊನೆಗೂ ಕೆಟ್ಟದ್ದೇನೂ ಆಗಿಲ್ಲ ಎಂದಿರುವ ಅವರು, ಸಿನಿಮಾಗಾಗಿ ಹುರಿಗೊಳಿಸಿರುವ ತಮ್ಮ ಮೈಯನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ 'ಫ್ಯಾಂಟಮ್' ಸಿನಿಮಾಗಾಗಿ ಡಿಸೆಂಬರ್ 4ರಿಂದ ನಾಲ್ಕನೇ ಹಂತದ ಚಿತ್ರೀಕರಣ ಆರಂಭವಾಗಲಿರುವ ಸಂತೋಷವನ್ನೂ ಅಭಿಮಾನಿಗಳಿಗೆ ತಿಳಿಸಿದ್ದಾರೆ.