ಗುರುವಾರವಷ್ಟೇ ಟ್ವಿಟರ್ನಲ್ಲಿ ಒಂದು ಪೋಸ್ಟ್ ಹಾಕಿ, ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದ 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್, ಈಗ ಕೊನೆಗೂ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಇಷ್ಟಕ್ಕೂ ಅವರೇನು ಪ್ರಶ್ನೆ ಹಾಕಿದ್ದರು ಮತ್ತು ಅದಕ್ಕೇನು ಉತ್ತರ ಕೊಟ್ಟಿದ್ದಾರೆ ಎಂದು ಗೊತ್ತಿಲ್ಲದಿದ್ದರೆ, ಮುಂದೆ ಓದಿ.
ಗುರುವಾರವಷ್ಟೇ ಪ್ರಶಾಂತ್ ನೀಲ್, ತಮ್ಮ ಹಾಗೂ ಯಶ್ ಅವರ ಸಂದರ್ಶನದ ಫೋಟೊಗಳನ್ನು ಶೇರ್ ಮಾಡುವುದರ ಜತೆಗೆ, 'ಇಲ್ಲಿ ಏನಾಗ್ತಿದೆ ಅಂತ ಗೆಸ್ ಮಾಡಿ' ಎಂದು ಪ್ರಶ್ನೆ ಕೇಳಿದ್ದರು. ಯಶ್ ಮತ್ತು ಪ್ರಶಾಂತ್ ಸಂದರ್ಶನ ನೀಡುತ್ತಿರುವುದಾದರೂ ಏಕೆ? ಏನಾದರೂ ದೊಡ್ಡ ಅನೌನ್ಸ್ಮೆಂಟ್ ಕಾದಿದೆಯಾ? ಎಂಬ ಪ್ರಶ್ನೆಗಳಿಗೆ ಅವರು ಏನೂ ಹೇಳಿರಲಿಲ್ಲ.
ಪ್ರಶಾಂತ್ ಎಸೆದ ಸವಾಲನ್ನು ಸ್ವೀಕರಿಸಿರುವ ಹಲವರು, ತಮಗೆ ತೋಚಿದ್ದನ್ನು ಉತ್ತರಿಸಿದ್ದರು. ಪ್ರಮುಖವಾಗಿ 'ಕೆಜಿಎಫ್' ಚಿತ್ರವು ತೆಲುಗು ಚಾನಲ್ವೊಂದರಲ್ಲಿ ಸದ್ಯದಲ್ಲೇ ಪ್ರೀಮಿಯರ್ ಆಗಲಿದ್ದು, ಆ ಕುರಿತು ಅವರು ಸಂದರ್ಶನ ನೀಡಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಇನ್ನೂ ಕೆಲವರು 'ಕೆಜಿಎಫ್ 2' ಚಿತ್ರದ ಬಗ್ಗೆ ಏನಾದರೂ ಅಪಡೇಟ್ ಕೊಡುತ್ತಿರಬಹುದು ಎಂದು ಹೇಳಿದ್ದರು.
ಈ ಪೈಕಿ ಮೊದಲ ಉತ್ತರ ಸರಿಯಾಗಿದೆ. 'ಕೆಜಿಎಫ್' ಚಿತ್ರದ ತೆಲುಗು ಟಿವಿ ಪ್ರೀಮಿಯರ್ ಇದೇ ಭಾನುವಾರ ಸಂಜೆ 5.30ಕ್ಕೆ ಮಾ ಟಿವಿಯಲ್ಲಿ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಮತ್ತು ಯಶ್, ಟಿವಿ ಸಂದರ್ಶನ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬ್ರೇಕ್ ತೆಗೆದುಕೊಳ್ಳುವ ಯೋಚನೆಯೇ ಇರಲಿಲ್ಲ. ಹಾಗಾಗಿ ಬ್ರೇಕ್ ತೆಗೆದುಕೊಳ್ಳುವುದಕ್ಕಿಂತ ಮುನ್ನ ಎರಡು ಬಾರಿ ಯೋಚಿಸಿ' ಎಂದು ಹೇಳಿದ್ದಾರೆ. ಹಾಗೆಯೇ ತೆಲಗು ಅವತರಣಿಕೆ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
‘ಕೆಜಿಎ್ 2’ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಇನ್ನೂ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.