ಬೆಂಗಳೂರು: ಯಶ್ ಬರ್ತ್ಡೇ ಪ್ರಯುಕ್ತ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆ ಆಗಿ ಹೊಸ ದಾಖಲೆ ಬರೆದಿದೆ. ಕೇವಲ ಭಾರತವಷ್ಟೇ ಅಲ್ಲ ಹೊರ ದೇಶಗಳಲ್ಲಿಯೂ ಸಿನಿಮಾ ಕ್ರೇಜ್ ಶುರುವಾಗಿದೆ. ಸಿನಿಮಾ ಬಿಡುಗಡೆ ಯಾವಾಗ ಎಂದು ಅಭಿಮಾನಿ ವಲಯದಲ್ಲಿಯೂ ತೀವ್ರ ಕುತೂಹಲ ಮೂಡಿಸಿದೆ. ಇದೀಗ ಇದೇ ಸಿನಿಮಾ ಬಿಡುಗಡೆಯ ಬಗ್ಗೆ ಒಂದಷ್ಟು ಮಾಹಿತಿ ಕೇಳಿಬರುತ್ತಿದೆ.
ಇದನ್ನೂ ಓದಿ: ಯುವರಾಜನ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್ …
ಹೌದು, ಒಂದಷ್ಟು ಮೂಲಗಳ ಪ್ರಕಾರ ಜುಲೈ 30ಕ್ಕೆ ವಿಶ್ವದಾದ್ಯಂತ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಇದೀಗ ಅದಕ್ಕೂ ಮೊದಲೇ ಸಿನಿಮಾ ತೆರೆಗೆ ಬರಲಿದೆ ಎಂಬ ಸುಳಿವು ಸಿಕ್ಕಿದೆ. ಅಂದರೆ, ಜುಲೈ 30ರ ಬದಲು, ಮೇ 30ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ನಲ್ಲಿ ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ಬರುವ ಬಗ್ಗೆ ಹೇಳಿಕೊಂಡಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಅಕ್ಟೋಬರ್ 23ರಂದೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಅದು ಈಡೇರಲಿಲ್ಲ. ಇದೀಗ ಮೇ. 30ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಟೀಸರ್ ಬಗ್ಗೆ ಈಗಾಗಲೇ ಚಿತ್ರತಂಡವೇ ಹೇಳಿಕೊಂಡಂತೆ 16 ಕೋಟಿ (160 ಮಿಲಿಯನ್) ಮಂದಿ ಕೆಜಿಎಫ್ ಟೀಸರ್ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಟೀಸರ್ ಮೆಚ್ಚಿಕೊಂಡವರ ಸಂಖ್ಯೆಯೂ ಮಿಲಿಯನ್ ಲೆಕ್ಕದಲ್ಲಿಯೇ ಇದೆ ಎಂದರೆ ನೀವು ನಂಬಲೇಬೇಕು. ಹೌದು ಬರೋಬ್ಬರಿ 77 ಲಕ್ಷ (7.7 ಮಿಲಿಯನ್) ಮಂದಿ ಟೀಸರ್ಗೆ ಲೈಕ್ ಒತ್ತಿದ್ದಾರೆ.