ಹೈದರಾಬಾದ್: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ.
ಇದೀಗ ಕಸ್ತೂರಿ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ನಟಿ ಕಸ್ತೂರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಟಿಎಎಸ್ಎಂಎಸಿ)ನ ಸರ್ಕಾರಿ ಮದ್ಯ ಕೇಂದ್ರಗಳಲ್ಲಿ ಹುಡುಗಿಯರು ಮದ್ಯವನ್ನು ಖರೀದಿ ಮಾಡುತ್ತಿರುವ ದೃಶ್ಯಗಳು ಕಸ್ತೂರಿ ಅವರು ಶೇರ್ ಮಾಡಿರುವ ವಿಡಿಯೋದಲ್ಲಿದೆ. ಕುಡಿಯಿರಿ ಹುಡುಗಿಯರೇ ಚೆನ್ನಾಗಿ ಕುಡಿಯಿರಿ. ಏನನ್ನೂ ಕಳೆದುಕೊಳ್ಳಬೇಡಿ. ಎಂಟು ಮಂದಿಯಲ್ಲಿ ಅವಳು ಒಬ್ಬಳು ಗಂಡು. ಇದು ತಪ್ಪೂ ಅಲ್ಲ, ಅಸಹ್ಯವೂ ಅಲ್ಲ ಎಂದು ವಿಡಿಯೋ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೆ, ಇದು ಎಂದಿನಂತೆ ವಾಟ್ಸ್ಆ್ಯಪ್ನಲ್ಲಿ ಬಂದ ವಿಡಿಯೋ ಎಂದು ಬರೆದಿದ್ದಾರೆ.
ಕಸ್ತೂರಿ ಅವರು ಶೇರ್ ಮಾಡಿರುವ ವಿಡಿಯೋ ಮತ್ತು ಅವರು ಹೇಳಿರುವ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಗಾಯಕಿ ಹಾಗೂ ಮಹಿಳಾ ಹೋರಾಟಗಾರ್ತಿ ಚಿನ್ಮಯಿ ಅವರು ಪ್ರತಿಕ್ರಿಯೆ ನೀಡಿದ್ದು, ಇಂತಹ ವಿಡಿಯೋಗಳನ್ನು ಶೇರ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ಕಾಮೆಂಟ್ ಮೂಲಕ ಬೆಂಬಲ ಸೂಚಿಸಿದ್ದು, ನಿಮ್ಮ ಪೋಸ್ಟ್ ಅನೇಕರನ್ನು ದಾರಿ ತಪ್ಪಿಸುತ್ತದೆ. ಡ್ರಗ್ಸ್ ತೆಗೆದುಕೊಳ್ಳುವಂತೆ ನೀವು ಪ್ರೋತ್ಸಾಹಿಸುತ್ತಿದ್ದೀರಿ ಎಂದು ಕಸ್ತೂರಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ನೀವೇಕೆ ಈ ವಿಡಿಯೋವನ್ನು ಶೇರ್ ಮಾಡಿದ್ದೀರಿ? ಸಿನಿಮಾ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳು ಪಬ್ ಮತ್ತು ಬಾರ್ಗಳಿಗೆ ಹೋಗುತ್ತಾರೆ. ಅವರ ಫೋಟೋ ಮತ್ತು ವಿಡಿಯೋಗಳನ್ನು ಇದೇ ರೀತಿ ಶೇರ್ ಮಾಡುವ ತಾಕತ್ತು ನಿಮ್ಮಲ್ಲಿದೆಯಾ? ಎಂದು ಪ್ರಶ್ನಿಸಿ ಕಸ್ತೂರಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೇ ಅಲ್ಲದೆ, ಸಾಮಾಜಿಕ ಕಾರ್ಯಕರ್ತೆ ಸ್ನೇಹಾ ಮೋಹನ್ದಾಸ್ ಎಂಬುವರು ಕಸ್ತೂರಿ ಅವರ ಫೋಟೋ ಇರುವ ನ್ಯೂಸ್ ಪೇಪರ್ ಫೋಟೋವನ್ನು ಶೇರ್ ಮಾಡಿದ್ದಾರೆ. ಯಾವುದೋ ಪಾರ್ಟಿಗೆ ಸಂಬಂಧಿಸಿದ ಫೋಟೋಗಳಾಗಿದ್ದು, ಕಸ್ತೂರಿ ಅವರ ಫೋಟೋವನ್ನು ಮಾರ್ಕ್ ಮಾಡಿ, ನಿಮ್ಮಂತೆ ಬಾರ್ನಲ್ಲಿ ನೃತ್ಯ ಮಾಡುವುದು ಸರಿಯೇ? ನಾನಿಲ್ಲಿ ಮದ್ಯ ಸೇವಿಸುವವರನ್ನು ಪ್ರೋತ್ಸಾಹಿಸುತ್ತಿಲ್ಲ. ಆದರೆ, ನಿಮ್ಮಿಂದ ಬಂದ ಇಂತಹ ಟ್ವೀಟ್ ನೋಡಿ ನನಗೆ ಅಸಹ್ಯ ಹುಟ್ಟಿದೆ. ಅದು ಅವರ ಆಯ್ಕೆ, ಅವರ ಹಣ ಮತ್ತು ಅವರ ಲಿವರ್. ಇದರಿಂದ ನಿಮಗೇನು ತೊಂದರೆ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಸ್ತೂರಿ, ನಾನು ಬಾರ್ ಮತ್ತು ಪಬ್ಗಳಲ್ಲಿ ಕುಡಿಯುತ್ತೇನೆ ಎಂದು ನೀವು ಹೇಳುತ್ತಿದ್ದೀರಿ. ನಾನು ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)