ಸಿನಿವಾಣಿ

'ಕಸ್ತೂರಿ ನಿವಾಸ' ಹೆಸರು ಬದಲಾಯ್ತು ... ಹೊಸ ಹೆಸರು ಏನು?

ಬೆಂಗಳೂರು: ದಿನೇಶ್ ಬಾಬು ನಿರ್ದೇಶನದಲ್ಲಿ, ರಚಿತಾ ರಾಮ್​ ಒಂದು ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗಷ್ಟೇ ಮುಹೂರ್ತವಾದ ಈ ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂಬ ಹೆಸರನ್ನು ಇಡಲಾಗಿತ್ತು. ಮಹೂತರ್ದಲ್ಲಿ ಚಿತ್ರದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತಿದ್ದಂತೆಯೇ ಅಪಸ್ವರಗಳು ಕೇಳಿಬಂದಿತ್ತು.

ಪ್ರಮುಖವಾಗಿ, ಈ ಹಿಂದೆ ಡಾ. ರಾಜಕುಮಾರ್ ಅಭಿನಯದಲ್ಲಿ ಮೂಡಿಬಂದಿದ್ದ 'ಕಸ್ತೂರಿ ನಿವಾಸ' ಚಿತ್ರ ಈಗಲೂ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಈಗ ಈ ಹಾರರ್​ ಚಿತ್ರಕ್ಕೆ ಅದೇ ಹೆಸರಿಡುವುದರಿಂದ, ಮೂಲ ಚಿತ್ರಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ರಾಜಕುಮಾರ್​ ಅವರ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಹೆಸರನ್ನು ಬದಲಾಯಿಸುವುದಕ್ಕೆ ಸಲಹೆ ನೀಡಿದ್ದರು. ಇನ್ನು ಮೂಲ ಚಿತ್ರ ನಿರ್ದೇಶಸಿದ್ದ ದೊರೆ-ಭಗವಾನ್​ ಜೋಡಿಯ ಭಗವಾನ್​ ಅವರು ಸಹ ಹೆಸರು ಬದಲಾಯಿಸಿದರೆ ಒಳ್ಳೆಯದು ಎಂದು ಸೂಚಿಸಿದ್ದರು.

ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿದ್ದ ಹಿರಿಯ ನಿರ್ದೇಶಕ ದಿನೇಶ್​ ಬಾಬು, ತಮಗೆ ಯಾರ ಮನಸ್ಸನ್ನೂ ನೋಯಿಸುವುದಕ್ಕೆ ಇಷ್ಟ ಇಲ್ಲ ಎಂದು ಹೇಳಿದ್ದರು. 'ಕಸ್ತೂರಿ ನಿವಾಸ' ಬದಲು 'ಕಸ್ತೂರಿ' ಎಂಬ ಹೆಸರನ್ನು ಇಡುತ್ತಿರುವುದಾಗಿ ಹೇಳಿದ್ದರು.

ಈಗ ಇನ್ನೊಮ್ಮೆ ಹೆಸರು ಬದಲಾಗಿದೆ. ಇದೀಗ ಚಿತ್ರಕ್ಕೆ 'ಕಸ್ತೂರಿ ಮಹಲ್' ಎಂದು ಹೆಸರಿಡಲಾಗಿದೆ. ಹಿರಿಯ ನಿರ್ದೇಶಕ ಭಾಗವಾನ್ ಅವರಿಗೂ ಶೀರ್ಷಿಕೆ ಬದಲಾವಣೆ ವಿಷಯ ತಿಳಿಸಿ ಅವರ ಆಶೀರ್ವಾದ ಪಡೆದಿರುವುದಾಗಿ ನಿರ್ಮಾಪಕ ರವೀಶ್ ಆರ್ ಸಿ ತಿಳಿಸಿದ್ದಾರೆ.

ಅಕ್ಟೋಬರ್ 5ರಿಂದ ಕಸ್ತೂರಿ ಮಹಲ್‌ ಗೆ ಕೊಟ್ಟಿಗೆಹಾರದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಹಾರಾರ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ‌ಈ‌ ಚಿತ್ರವು ದಿನೇಶ್​ ಬಾಬು ಅವರ 50ನೇ ಚಿತ್ರವಾಗಿದ್ದು, ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ರಚಿತಾ ರಾಮ್​ ಅಲ್ಲದೆ, ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಮಾಡುತ್ತಿದ್ದಾರೆ.