ಸಿನಿವಾಣಿ

ಸತತ ಟ್ರೋಲ್​ಗಳಿಂದ ಕುಗ್ಗಿ ಹೋದ ಕರಣ್​ ಜೋಹರ್​!

chetannadiger

ಸುಶಾಂತ್​ ಸಿಂಗ್​ ಆತ್ಮಹತ್ಯೆಯ ನಂತರ ಬಾಲಿವುಡ್​ನ ಒಂದು ವರ್ಗ ಮತ್ತು ಸುಶಾಂತ್​ ಅಭಿಮಾನಿಗಳು, ಕರಣ್ ಜೋಹರ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕರಣ್​ ಸ್ವಜನಪಕ್ಷಪಾತ ಮಾಡುತ್ತಿರುವುದರಿಂದ ಸುಶಾಂತ್​ರಂತಹವರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಮತ್ತು ಅದೇ ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಶಾಂತ್​ ನಿಧನರಾಗಿ ಮೂರು ವಾರಗಳಾದರೂ, ಈ ಟ್ರೋಲ್​ಗಳು ಮುಂದುವರೆದಿದ್ದು, ಇದರಿಂದ ಕರಣ್​ ಜೋಹರ್​ ನಿಜಕ್ಕೂ ಕುಗ್ಗಿ ಹೋಗಿದ್ದಾರೆ ಎಂದು ಅವರ ಆಪ್ತರು ಇತ್ತೀಚೆಗೆ ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.

ಕರಣ್​ ಯಾವತ್ತೂ ವಿಮರ್ಶೆ ಮತ್ತು ಟೀಕೆಗಳಿಗೆ ಹೆದರಿಲ್ಲ. ವೃತ್ತಿಜೀವನದ ಆರಂಭದಿಂದಲೂ ಅವರು ಸಾಕಷ್ಟು ಟೀಕೆಗಳನ್ನು ಕೇಳಿದ್ದು, ಅದನ್ನೆಲ್ಲಾ ಬಹಳ ಸ್ಪೋರ್ಟಿವ್​ ಆಗಿ ತೆಗೆದುಕೊಂಡಿದ್ದರು. ಆದರೆ, ಈ ಬಾರಿ ಅವರು ಸಹ ವಿಚಲಿತರಾಗಿದ್ದಾರೆ. ಒಂದು ಕಡೆ ಬೆಂಬಿಡದ ಆರೋಪ, ಇನ್ನೊಂದು ಕಡೆ ತಮ್ಮ ಬೆಂಬಲಕ್ಕೆ ಯಾರೂ ನಿಲ್ಲದಿರುವುದು ಕರಣ್​​ ಜೋಹರ್​ ಅವರ ನಿದ್ದೆಗೆಡಿಸಿದ್ದು, ಕೆಲವು ದಿನಗಳ ಹಿಂದೆಯೇ ಮಾಮಿ (ಮುಂಬೈ ಅಕಾಡೆಮಿ ಆಫ್​ ದಿ ಮೂವಿಂಗ್​ ಇಮೇಜಸ್​​) ಚಿತ್ರೋತ್ಸವದ ಮಂಡಳಿಗೆ ರಾಜಿನಾಮೆ ನೀಡಿದ್ದರು.

ನಂತರದ ದಿನಗಳಲ್ಲಿ ತಮ್ಮ ವಿರುದ್ಧ ಜನಸಾಮಾನ್ಯರ ವಲಯದಲ್ಲಿ ಹೆಚ್ಚುತ್ತಿರುವ ಆಕ್ರೋಶದ ಕುರಿತು ಕರಣ್​ ಇನ್ನಷ್ಟು ವಿಚಲಿತರಾಗಿದ್ದಾರಂತೆ. ಇದರಿಂದ ಅವರ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರಿದೆಯಂತೆ. ಕರಣ್​ ಅಷ್ಟೊಂದು ಕುಗ್ಗಿರುವುದಕ್ಕೆ ಕಾರಣ, ಅವರ ಮೂರು ವರ್ಷದ ಅವಳಿ ಮಕ್ಕಳ ಬಗ್ಗೆ ಜನ ಕೆಟ್ಟದಾಗಿ ಟ್ರೋಲ್​ ಮಾಡುತ್ತಿರುವುದು. ಕೆಲವರು ಆ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿರುವುದು ನಿಜಕ್ಕೂ ಕರಣ್​ ನಿದ್ದೆಗೆಡಿಸಿದೆ.

ಅಷ್ಟೇ ಅಲ್ಲ, ಅನನ್ಯ ಪಾಂಡೆಯಂತಹ ಹೊಸ ಹುಡುಗಿ ಸಹ ತನ್ನಿಂದಾಗಿ ಜನರ ದೃಷ್ಟಿಯಲ್ಲಿ ಕೆಟ್ಟವರಾಗುತ್ತಿರುವ ಬಗ್ಗೆ ಕರಣ್​ಗೆ ಬಹಳ ನೋವಾಗಿದೆಯಂತೆ. ಸುಶಾಂತ್​ ಸಾವಿಗೆ ಬದಲಿಯಾಗಿ, ಆತ್ಮಹತ್ಯೆ ಮಾಡಿಕೋ ಎಂದು ಅನನ್ಯಗೆ ಕೆಲವರು ನೆಟ್ಟಿಗರು ಹೇಳಿದ್ದನ್ನು ನೋಡಿ ಕರಣ್​ ಬಹಳ ಬೇಸರಗೊಂಡಿದ್ದಾರೆ ಎಂದು ಕರಣ್​ ಅವರ ಆಪ್ತರು ಹೇಳಿಕೊಂಡಿದ್ದಾರೆ.

ಈ ಕುರಿತು ಕರಣ್ ಯಾಕೆ ಮಾತಾಡುತ್ತಿಲ್ಲ ಅಥವಾ ಸ್ಪಷ್ಟನೆ ನೀಡುತ್ತಿಲ್ಲ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಸದ್ಯಕ್ಕೆ ಪರಿಸ್ಥಿತಿ ಸರಿ ಇಲ್ಲದ ಕಾರಣ ಮತ್ತು ಇನ್ನಷ್ಟು ಟ್ರೋಲ್​ ಆಗುವ ಭಯದಲ್ಲಿ ಕರಣ್​, ಸೋಷಿಯಲ್​ ಮೀಡಿಯಾ ಅಥವಾ ಸ್ಪಷ್ಟೀಕರಣ ಕೊಡುವುದರಿಂದ ದೂರವೇ ಉಳಿದಿದ್ದಾರಂತೆ. ಇವೆಲ್ಲವೂ ಸ್ವಲ್ಪ ತಿಳಿಯಾದ ಮೇಲೆ ಕರಣ್​ ಮುಂದೆ ಬಂದು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.