ಸಿನಿವಾಣಿ

ನನ್ ಹೊಟ್ಟೆ ಮೇಲೆ ಯಾಕೆ ಹೊಡೀತೀಯೋ ಮಾರಾಯ ...

ಬಾಲಿವುಡ್‌ನ ಒಂದು ಕಾಲದ ಸ್ಟಾರ್ ನಟರೆಲ್ಲರೂ ಇದೀಗ ತಂದೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಎಂದೇ ಗುರುತಿಸಲ್ಪಡುವ ಕರಣ್ ಜೋಹಾರ್ ಸಹ ಇನ್ನು ಮುಂದೆ ತಂದೆ ಪಾತ್ರಗಳಲ್ಲಿ ನಾನು ನಟಿಸೋಕೆ ರೆಡಿ ಅಂತ ಹೇಳಿಕೊಂಡಿದ್ದಾರೆ.

ಇಷ್ಟು ದಿನ ಆ್ಯಕ್ಷನ್-ಕಟ್ ಹೇಳುತ್ತಿದ್ದ ಕರಣ್ ಜೋಹಾರ್‌ಗೆ ಯಾಕೆ ಇದ್ದಕ್ಕಿದ್ದಂತೆ ಅಪ್ಪನ ಪಾತ್ರಗಳಲ್ಲಿ ಮಿಂಚುವುದಕ್ಕೆ ಆಸೆಯಾಯಿತು ಎಂಬ ಪ್ರಶ್ನೆ ಬರುವುದು ಸಹಜವೇ. ಅದಕ್ಕೆ ಉತ್ತರ ಲಾಕ್‌ಡೌನ್. ಈ ಲಾಕ್‌ಡೌನ್‌ಗೂ, ಅಪ್ಪನ ಪಾತ್ರ ಮಾಡೋದಕ್ಕೆ ನಾನು ರೆಡಿ ಅಂತ ಕರಣ್ ಹೇಳಿದ್ದಕ್ಕೂ ಏನು ಸಂಬಂಧ ಅಂತೀರಾ? ಅದೇ ಸ್ವಾರಸ್ಯ.

ಇದುವರೆಗೂ ಕೂದಲಿಗೆ ಕಪ್ಪು ಹಚ್ಚುತ್ತಿದ್ದ ಕರಣ್, ಕೆಲವು ದಿನಗಳಿಂದ ಕಪ್ಪು ಹಚ್ಚದೆ, ಕೂದಲೆಲ್ಲಾ ಬಿಳಿ ಬಣ್ಣಕ್ಕೆ ತಿರುಗುತ್ತಿದೆ. ಅದನ್ನೇ ತಮಾಷೆ ಮಾಡಿರುವ ಅವರು, ಸೋಷಿಯಲ್ ಮೀಡಿಯಾದಲ್ಲಿ ಒಂದು ಹೊಸ ಪೋಸ್ಟ್ ಹಾಕಿದ್ದಾರೆ. ‘ನನ್ನ ನಟನೆ, ಈ ವೈರಸ್‌ಗಿಂಥ ಕೆಟ್ಟದು ಎಂದು ನನಗೆ ಗೊತ್ತಿದೆ. ಆದರೂ ಇನ್ನೊಂದು ಚಾನ್ಸ್ ತೆಗೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಾಗಾಗಿ ಹೊಸಬರೊಂದಿಗೆ ಕೆಲಸ ಮಾಡುವ ಆಸಕ್ತಿ ಇರುವ ಎಲ್ಲಾ ನಿರ್ದೇಶಕರಿಗೂ ನನ್ನದೊಂದು ಮನವಿ. ನಿಮ್ಮ ಚಿತ್ರಗಳಲ್ಲಿ ತಂದೆ ಪಾತ್ರವಿದ್ದರೆ, ಧಾರಾಳವಾಗಿ ನನ್ನನ್ನು ಸಂಪರ್ಕಿಸಬಹುದು. ಆದರೆ, ರಿಸ್ಕ್ ಸಂಪೂರ್ಣ ನಿಮ್ಮದೇ’ ಎಂದು ತಮಾಷೆಗಾಗಿ ಹೇಳಿದ್ದಾರೆ.

ಕರಣ್ ಜೋಹಾರ್‌ರ ಈ ಪೋಸ್ಟ್‌ಗೆ ಬಾಲಿವುಡ್ ಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚೆನ್ನಾಗಿ ಕಾಣುತ್ತಿದ್ದೀರಿ, ಒಂದು ಟ್ರೈ ಮಾಡಿ ಎಂದು ಹಲವರು ಬೆನ್ನು ತಟ್ಟಿದ್ದಾರೆ. ಆದರೆ, ಅನಿಲ್ ಕಪೂರ್ ಮಾತ್ರ, ‘ನನ್ ಹೊಟ್ಟೆ ಮೇಲೆ ಯಾಕೆ ಹೊಡೀತೀಯೋ ಮಾರಾಯ ...’ ಎಂದು ಕಾಲೆಳೆದಿದ್ದಾರೆ. ಕರಣ್ ಜೋಹಾರ್ ತಮ್ಮ ಪಾತ್ರಗಳನ್ನು ಕಸಿದುಕೊಳ್ಳಬಹುದು ಎಂಬ ಭಯ ಅನಿಲ್ ಕಪೂರ್ ಅವರಿಗೆ ಖಂಡಿತಾ ಇಲ್ಲ. ಆದರೂ ತಮ್ಮ ಬಹುಕಾಲದ ಗೆಳೆಯನನ್ನು ಈ ರೀತಿ ಉತ್ತರ ಕೊಡುವ ಮೂಲಕ ಅನಿಲ್ ಕಪೂರ್ ಕಿಚಾಯಿಸಿದ್ದಾರೆ.

ಇನ್ನು ಅದೆಷ್ಟು ನಿರ್ದೇಶಕರು ಕರಣ್ ಜೋಹಾರ್ ಅವರ ಈ ಪೋಸ್ಟ್ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಕರಣ್‌ಗೆ ಎಷ್ಟು ಚಿತ್ರಗಳಲ್ಲಿ ತಂದೆ ಪಾತ್ರ ಮಾಡುವ ಅವಕಾಶ ಸಿಗುತ್ತದೆ ಎಂದು ಕಾದು ನೋಡಬೇಕಿದೆ.