ಬೆಂಗಳೂರು: ರಾಬರ್ಟ್ ಚಿತ್ರದ ತೆಲುಗು ಅವತರಣಿಕೆಯ ಕಣ್ಣೇ ಸದಿರಿಂದಿ ಹಾಡು ಹೇಳಿ ಸಖತ್ ಫೇಮಸ್ ಆದವರು ಮಂಗ್ಲಿ. ಇದೀಗ ಇದೇ ಗಾಯಕಿ ಶಿವಣ್ಣ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಹಾಡೊಂದಕ್ಕೆ ಕಂಠದಾನ ಮಾಡಲಿದ್ದಾರಾ ಎಂದಲ್ಲ. ಬದಲಿಗೆ ನಟಿಯಾಗಿ ಎಂಟ್ರಿಕೊಡಲಿದ್ದಾರೆ.
ಹೌದು, ರಾಮ್ ಧುಲಿಪುಡಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಶಿವಣ್ಣ ಅವರ 124ನೇ ಚಿತ್ರದಲ್ಲಿ ಮಂಗ್ಲಿ ವಿಶೇಷ ಪಾತ್ರದೊಂದಿಗೆ ಆಗಮಿಸುತ್ತಿದ್ದಾರೆ. ಅವರ ಪಾತ್ರ ಎಂಥದ್ದು, ಎಂಬ ಮಾಹಿತಿಯನ್ನು ಸಿನಿಮಾ ಶುರುವಾಗುತ್ತಿದ್ದಂತೆ ಚಿತ್ರತಂಡ ಹೇಳಿಕೊಳ್ಳಲಿದೆ.
ಅಂದಹಾಗೆ ಬಾಲ ಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಈ ಚಿತ್ರಕ್ಕಡೆ ಬಂಡವಾಳ ಹೂಡುತ್ತಿದ್ದಾರೆ. ನಾಯಕರಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಜೂನ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. 70 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಇದನ್ನೂ ಓದಿ: ಕಾಂಡೋಮ್ ಗುಣಮಟ್ಟ ಪರೀಕ್ಷೆಗಿಳಿದ ನಟಿ ರಾಕುಲ್ ಪ್ರೀತ್!
ಖ್ಯಾತ ನಟರಾದ ನಾಜರ್, ಸಂಪತ್ ಹಾಗೂ ಸಾಧುಕೋಕಿಲ ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ರವಿಕುಮಾರ್ ಸನಾ ಅವರ ಛಾಯಾಗ್ರಹಣವಿದೆ. "ಟಗರು" ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.